ನೆತ್ತರಿಲ್ಲದೇ ಹತ್ಯೆಗೈಯುವ ಕತ್ತಿಯೆಂದರೆ...
ಎಲುಬಿಲ್ಲದ ನಾಲಿಗೆ, ಅನ್ಯರ ಭಾವನೆಗಳಿಗೆ ಬೆಲೆ ಕೊಡದೆ ಆಡುವ ಮಾತುಗಳು, ಕೆಲವೊಮ್ಮೆ ಮಾತನಾಡಲೇಬೇಕಾದಾಗ ಬುದ್ಧಿವಂತಿಕೆಯ ಮೌನ, ನಿರ್ದಾಕ್ಷಿಣ್ಯವಾಗಿ ಅಹಂಕಾರವನ್ನು ಸ್ವಾಭಿಮಾನ ಎಂದು ಭ್ರಮಿಸಿ ತೆಗೆದುಕೊಳ್ಳುವ ತಪ್ಪು ನಿರ್ಧಾರಗಳು, ಅರಿವಿನ ಆಳ ಅರಿಯದೆ ಬದುಕುವ ಅಂಧಕಾರದ ಬದುಕು. ಸ್ನೇಹಿತರ ಪ್ರತಿಕ್ರಿಯೆಯನ್ನು ನಂಬದೆ ಅನುಮಾನಿಸುವುದು. ರಮೇಶ ನಿರಾತಂಕ
0 Comments
ನಾನೇನು ತಪ್ಪು ಮಾಡದ ಪರಮಾತ್ಮನಲ್ಲ
ಒಮ್ಮೊಮ್ಮೆ ತಪ್ಪುಗಳನ್ನು ಎತ್ತಿ ತೋರಿದಾಗ ತಲೆ ಬಾಗುವುದಿಲ್ಲ ನನ್ನ ತಪ್ಪು ತಿದ್ದು ನನ್ನಗೆಳೆಯ, ನಾ ನಿನ್ನ ತಪ್ಪು ತಿಳಿಯುವುದಿಲ್ಲ ತಪ್ಪು ಹೇಳಲು ಕೇಳಲು ಒಂದು ರೀತಿ ಇದೆ, ಸಮಯವಿದೆ ಸಂಯಮದಿ ಕಾದು ಹೇಳದ ವಿಷಯ ಜಗದಿ ಮತ್ತೆ ಏನಿದೆ ನನ್ನ ಆರು ನಿನಗೆ ಒಂಬತ್ತರಂತೆ ಕಾಣಬಹುದು ನನ್ನ ದೃ ಷ್ಟಿಯಿಂದ ಒಮ್ಮೆ ನೋಡು ಸತ್ಯ ಕಾಣ ಸಿಗುವುದು ನಾ ತಪ್ಪು ಮಾಡಿದರೆ ಕ್ಷಮಿಸಿ ಬಿಡು ಮನವ ಬಿಚ್ಚಿ ಮಾತನಾಡು ನಿನ್ನ ಅನಿಸಿಕೆಯನ್ನು ತಿಳಿಸಿಬಿಡು ಮಿಗಿಲಲ್ಲ ತಪ್ಪು ಸ್ನೇಹಕಿಂತ ಮನದಿ ಕೊರಗಿ ಕೊರಗಿ ಅನುಭವಿಸದಿರು ಏಕಾಂತ ತಪ್ಪು ಮಾಡದವರು ಯಾರಿಲ್ಲ ಜಗದಲಿ ಎಲ್ಲರೂ ಸ್ವಾರ್ಥಿಗಳೆ ಮನದಲಿ ರಮೇಶ ಎಂ.ಎಚ್. ನಿರಾತಂಕ ಎಲ್ಲರ ಕಣ್ಣುಗಳು ಒಂದೇ ಆದರೆ ನೋಡುವ ನೋಟ ಬೇರೆ ಬೇರೆ
ಎಲ್ಲರ ಮನಸ್ಸು ಒಂದೇ ಆದರೆ ವಿಷಯ ಅರ್ಥೈಸುವ ಬಗೆ ಬೇರೆ ಬೇರೆ ಎಲ್ಲರ ಕಿವಿಗಳ ಬಗೆ ಒಂದೇ ಆದರೆ ಗ್ರಹಿಸುವ ವಿಧಾನ ಬೇರೆ ಬೇರೆ ಕೇಳಿದ್ದು ನೋಡಿದ್ದು, ಹೊಗಳಿದ್ದು, ತೆಗಳಿದ್ದು ಸುಳ್ಳಾಗಬಹುದು ಜೀವನದ ಕೊನೆಯವರೆಗೂ ಭ್ರಮೆಯಲ್ಲೇ ಬದುಕಬಹುದು ಜೀವನದ ಗುರಿ ಇದೆ ಎಂದು ನಂಬಿ ಕೊನೆಗೆ ಗುರಿ ತಲುಪದಿರಬಹುದು ಸಂಭ್ರಮ, ಸಂತಸವೆಂದು ಆಚರಿಸಿದ ಆಚರಣೆಗಳು ಅರ್ಥ ಕಳೆದುಕೊಳ್ಳಬಹುದು ಬುದ್ಧ ಎಂಬ ಪದ ಕಿವಿಗೆ ಬಿದ್ದೊಡನೆ ಬುದ್ಧನೇ ನಾನಾದಂತೆ ಭ್ರಮಿಸಬಹುದು ಧ್ಯಾನಿಸಿ, ಶ್ರಮಿಸಿ ಬುದ್ಧನಂತೆ ನಮ್ಮದೇ ಮಾರ್ಗವ ಕಂಡುಕೊಳ್ಳದಿದ್ದರೆ ಬುದ್ಧನಂತೆ ಜೀವನದ ಸಾರ ಕಳೆದುಕೊಂಡಂತೆ ಬದುಕಿನ ದಿನಗಳ ಸವೆಸಿದರೂ ಬದುಕಿದ್ದು ಸತ್ತಂತೆ ರಮೇಶ ಎಂ.ಎಚ್. ನಿರಾತಂಕ ಗೆಲ್ಲಲು ಹೊರಟವರು ನಾವು
ಯಾರನ್ನು ಗೆಲ್ಲಬೇಕು ನಾವು ನೀವು ಸ್ನೇಹಿತರ ಮನಸ್ಸನ್ನು ಸಮಾಜದಲ್ಲಿರುವ ಜನರನ್ನು ಜಗತ್ತಿಗೆ ಹೊತ್ತು ತಂದ ಜನ್ಮದಾತರನ್ನು ಜೀವನ ಹಂಚಿಕೊಂಡ ಜೀವನ ಸಂಗಾತಿಯನ್ನು ಜನ್ಮ ನೀಡಿದ ಮಕ್ಕಳನ್ನು ಹೊನ್ನು, ಹೆಣ್ಣು, ಮಣ್ಣನ್ನು ಯಾವುದು ಮೊದಲು ಯಾವುದು ಆನಂತರ ಎಲ್ಲವನ್ನು ಗೆಲ್ಲಬೇಕು ಎಂಬರು ಹಲವರು ಕೆಲವು ಗೆದ್ದರೆ ಸಾಕು ಎಂಬುತ ಸಾಗುವರು ಕೆಲವರು ಗೆಲ್ಲಲು ಮತ್ತಷ್ಟಿವೆ ಎಂಬ ದಾವಂತದಲ್ಲಿ ಹೆಜ್ಜೆ ಹಾಕುವರು ಕೆಲವರು ಕಣ್ಣ ಮುಂದಿನ ಕೆಲಸವನ್ನು ಕಂಡು ಕಾಣದಂತೆ ಕುಂತಿಹರು ಹಲವರು ಅಹಂಕಾರವನ್ನು ಗೆಲ್ಲಲು ಗೊತ್ತಿಲ್ಲ ಪ್ರೀತಿಯಿಂದ ಬದುಕಲು ಕಲಿಯಲಿಲ್ಲ ಸ್ನೇಹದ ಅರ್ಥ ಹುಡುಕಲಿಲ್ಲ ಸಮಾಜದ ನೋವು ತಿಳಿಯಲಿಲ್ಲ ಗೆಲ್ಲಲು ನೀನು ಯಾರು? ಯಾವ ಊರು? ಹೇಗೆ ಬಂದೆ, ಎಲ್ಲಿಗೆ ಹೊರಟಿರುವೆ ? ಪ್ರಶ್ನೆಗಳು ಸಾವಿರಾರು ಕೆಲವರು ಒಗಟಿನ ಪ್ರಶ್ನೆಗಳ ಹುಡುಕಲು ಹೊರಡುವರು ಹಲವರು ಆಟವಾಡಿಕೊಂಡು ಸುಮ್ಮನೆ ಕಾಲಕಳೆಯುವರು ಉತ್ತರ ಸಿಕ್ಕವರು ಮೌನದಲ್ಲಿ ಕುಂತು ಧ್ಯಾನಿಸುವರು ಉತ್ತರ ಸಿಗದವರು ಜಗದ ನಾಟಕ ನೋಡುತ ಆಡುತ ನಿದ್ರಿಸುವರು ಅವರವರ ದಾರಿ ಅವರವರೆ ಕಂಡುಕೊಂಡ ಜಾಣರು ನಾವು ಕಂಡುಕೊಂಡದ್ದೇ ದಾರಿ ಸತ್ಯವೆಂದುಕೊಂಡು ಸಾಗುತಿರುವೆವು ರಮೇಶ ಎಂ.ಎಚ್. #ನಿರಾತಂಕಕವನ ಒಂಟಿಯಾಗಿ ಇರುವುದು ಕಲಿಯಲಿಲ್ಲ
ಒಬ್ಬನೆ ಕುಳಿತರೆ ಮನಸ್ಸು ನಲಿಯುವುದಿಲ್ಲ ಅಲ್ಲಿ-ಇಲ್ಲಿ ಅಡ್ಡಾಡಿದರೆ ದಿನ ಮುಗಿಯಿತು ಮನಸ್ಸಿಗೆ ಬಂದಂತೆ ಕುಣಿದಾಡಿದರೆ ವರುಷ ಉರುಳಿತು ಬದುಕು ಸಾಗುತ್ತಿದೆ ಅಂದುಕೊಂಡು ಸಾಗುತ್ತಿದ್ದೇವೆ ನಿಲ್ದಾಣ ಬಂದಾಗ ಏನು ಮಾಡಲಿಲ್ಲ ಎಂದು ಕೊರಗುತ್ತೇವೆ ಒಮ್ಮೆ ಯೋಚಿಸಿ ಏನು ಮಾಡುತ್ತಿದ್ದೇವೆ ಇದುವರೆಗೂ ಏನು ಮಾಡಿದ್ದೇವೆ ಬಾಲ್ಯದ ಬದುಕು ಸಂತಸ ತಂದಿತ್ತು ಶಾಲೆಯ ದಿನಗಳು ಬದುಕು ಕಲಿಸಲು ಹೊರಟಿತ್ತು ಕಾಲೇಜಿನ ದಿನಗಳು ಕನಸ ಕಂಡಿತ್ತು ಕೆಲಸದ ದಿನಗಳು ಪೈಪೋಟಿ ಕಲಿಸಿತ್ತು ಓಡಲು ಹೊರಟೆವು ಯಾವುದನ್ನು ಹಿಂದಿಕ್ಕಲೋ ಗೊತ್ತಿಲ್ಲ ಅಪ್ಪ, ಅಮ್ಮ, ಮಕ್ಕಳಿಗೆ, ಸಂಬಂಧಿಕರಿಗೆ ಸಮಯವಿಲ್ಲ ಸ್ನೇಹ, ಪ್ರೀತಿ, ಮಮತೆ ಎಲ್ಲವೂ ವ್ಯಾಪಾರ ವ್ಯವಹಾರಗಳಾಗಿ ಸಂತಸ ಹುಡುಕುತ್ತಾ ವಿದೇಶಿ ಪ್ರಯಾಣಿಗರಾಗಿ ಜಗದ ನಿಯಮ ಮರೆತು ಮೆರೆದು ಸಾಧಿಸಿದ್ದೇವೆಂಬ ಭ್ರಮೆಯಲ್ಲಿ ಮಿಂದು ಜಗದ ಪಯಣ ಮುಗಿಸುತ್ತಿರುವೆವು ಅಪ್ಪಿ ಇನ್ನಾದರೂ ಪ್ರೀತಿ ಕೊಡಿ ಮಮತೆಯಿಂದ ಮಾತನಾಡಿ ಸಂಬಂಧಗಳ ಅರಿತು ನೋಡಿ ಒಂಟಿಯಾಗಿ ಧ್ಯಾನ ಮಾಡಿ ಇಂದೇ ಕೊನೆಯ ದಿನ ಎಂದು ಬದುಕಿನೋಡಿ ಜೀವನದ ಸುಖವ ನೋಡಿ... ರಮೇಶ ನಿರಾತಂಕ #ನಿರಾತಂಕಕವನ ಬೀದಿಯಲ್ಲಿ ನೋಡಿದ್ದು ಒಂದೇ ಸಾವು,
ಆ ಮನದಲ್ಲಿ ತುಂಬಿ ಮಡುಗಟ್ಟಿತು ನೋವು, ಪ್ರಶ್ನೆಗಳು ಉದ್ಭವಿಸಿದವು ಹಲವು ಹಲವು, ಜ್ಞಾನೋದಯದೆಡೆಗೆ ನಡೆಸಿದವು. ಒಂದೇ ದಿನ ಸಾಕಾಯಿತು ಜಗದ ಸಂಕಷ್ಠವನು ಅಳೆದು ನೋಡಲು ಒಂದೇ ಸಾವು ಸಾಕಾಯಿತು ಸಿದ್ದಾರ್ಥ ಬುದ್ಧನಾಗಲು ದಿನವಿಡೀ ನೋಡುತ್ತಿದ್ದೇವೆ ನಾವು ಸಾಲು ಸಾಲು ಸಾವು ನಮ್ಮಲ್ಲಿ ಮಡುಗಟ್ಟಬಹುದೆ ನೋವು? ಪ್ರಶ್ನೆಗಳೇಳುತಿಹವೆ ಹಲವು ಹಲವು ಜ್ಞಾನೋದಯ ಬುದ್ಧನಿಗೆ ಜ್ಞಾನ ಜಗದಗಲಕೆ ಸತ್ಯ ಅಹಿಂಸೆಗಳ ಕೊಡುಗೆ ಜಗಕೆ ಹುಡುಕಿದರೆ ಸಿಗಬಹುದೆ ನಮ್ಮೊಳಗೆ ಎಲ್ಲಿದ್ದೇವೆ ನಾವು ನಾಗರೀಕತೆಯ ನೆಪದಲಿ? ತಂತ್ರಜ್ಞಾನದ ಬೆಳಕಿನ ಕತ್ತಲಲ್ಲಿ ಎಲ್ಲವನ್ನು ಮಾರಾಟ ಮಾಡುವ ವ್ಯವಹಾರಿಕತೆಯಲಿ ಮಾನವೀಯತೆಯನ್ನು ಮುಚ್ಚಿಡುತ ಮನದಲ್ಲಿ ಎಲ್ಲಿದ್ದೇವೆ ನಾವು? ಎಲ್ಲಿದ್ದೇವೆ ಎಲ್ಲಿದ್ದೇವೆ? ರಮೇಶ ಎಂ.ಎಚ್. ನಿರಾತಂಕ #ನಿರಾತಂಕಕವನ ಸ್ನೇಹ ಎಂಬುದು ಕನ್ನಡಿಯಂತೆ
ನಕ್ಕರೆ ನಕ್ಕು, ಅತ್ತಾಗ ಅಳುವುದು ನೆರಳಂತೆ ಹಿಂದೆ ಬರುವುದು ನಗುವಾಗ ಅಳುತ, ಅಳುವಾಗ ನಗುತ ನಟಿಸಿದರೆ ಆಪತ್ತು ತರುವುದು ವಜ್ರದಂತೆ ಜೋಪಾನ ಮಾಡಿ ಕಾಪಾಡು ಹಣದ ಆಸೆಗೂ ಮೀರಿ ಪ್ರೀತಿ ಕೊಡು ನನ್ನಂತೆ ಅವನೆಂದು ಮಮತೆ ನೀಡು ಗೊತ್ತಾಗದೆ ತಪ್ಪು ಮಾಡಿದರೆ ಕ್ಷಮಿಸಿಬಿಡು ದುರಾಸೆ ಇರುವವನೆಂದು ತಿಳಿದರೆ ದೂರವಿಡು ರಮೇಶ ಎಂ.ಎಚ್. ನಿರಾತಂಕ ಎಲ್ಲವ ಓದಬಲ್ಲೆ, ಎಲ್ಲವ ಕೇಳಬಲ್ಲೆ
ಸಮಾಜಕ್ಕೆ ತಕ್ಕಂತೆ ನಟಿಸಬಲ್ಲೆ ಅಂತರಂಗವ ನೋಡಲೊಲ್ಲೆ ನಟಿಸು ನಿ ಅಂತರಂಗದ ತಾಳಕ್ಕೆ ಭಯ, ಹೆದರಿಕೆ ಏತಕೆ ರಮೇಶ ಎಂ.ಎಚ್. ನಿರಾತಂಕ ಜಗಳವಾಡಲು ಕೆಣಕಿದರೆ ನಾನು ಮೌನಿಯಾಗುವೆ.
ಅವಮಾನಿಸಿದರೆ ನಾನು ಅವಮಾನವ ನನ್ನೆದೆಗೆ ತಾಕಿಸಿದೆ ಕಸದಬುಟ್ಟಿಗೆ ಎಸೆವೆ. ದ್ವೇಷ ಎದೆಯಲ್ಲಿ ಇಣುಕಿದರೆ ನಾನು ವಿಷಕುಡಿದು ಬೇರೆಯವನ ಸಾವ ಬಯಸಿದಂತೆಂದು ದ್ವೇಷವ ನಂದಿಸುವೆ. ಗುರಾಯಿಸಿದರೆ ಮುಗುಳು ನಗೆ ಬೀರಿ ಗುರಾಯಿಸಿದವನ ಮರೆತುಬಿಡುವೆ. ಮೋಸಹೋದರೆ ನನ್ನ ಹಿಂದಿನ ಜನ್ಮದ ಕರ್ಮದ ಫಲವೆಂದುಕೊಳುವೆ. ಕೆಣಕಿದ, ಅವಮಾನಿಸಿದ, ದ್ವೇಷಿಸಿದ ಹಾಗೂ ಗುರಾಯಿಸಿದವರಿಗಾಗಿ ನನ್ನಲ್ಲಿ ಸಮಯವಿಲ್ಲ. ನಾನಾಯಿತು ನನ್ನ ಪಾಡಾಯಿತು ಎಂದು ನಲಿವೆ. ರಮೇಶ ಎಂ.ಎಚ್. ನಿರಾತಂಕ ಯೌವನದಲ್ಲಿ ಮತ್ತೆ ಮತ್ತೆ ನೆನಪಾಗುವುದು
ಹಳೆಯ ದ್ವೇಷ. ಮೆತ್ತಗಾದ ಮೇಲೆ ಗೊತ್ತಾಗುವುದು ದ್ವೇಷ ನನ್ನೆದೆಯಲ್ಲಿದ್ದು ನನ್ನನ್ನೆ ಸುಡುತ್ತಲಿರುವ ವಿಷ. ಕೆಲವರು ಮೆತ್ತಗಾದರೂ ವಿಷ ಹೊತ್ತು ತಿರುಗುವರು ದ್ವೇಷ ಹಾಗೂ ವಿಷದ ನಡುವೆ ಅಂತರ ಅರಿಯದ ಮೂಢರು ಸುಡುತ್ತಿದ್ದರೂ ಬೆಚ್ಚಗೆ ಮಜಕೊಡುತ್ತಿದೆ ಎಂದು ಮೈಮರೆಯುವರು ಸುಟ್ಟು ಸಾವು ಹತ್ತಿರ ಬಂದರೂ ಅರಿವಿನ ಮಟ್ಟ ಮುಟ್ಟದೆ ಕಣ್ಣು ಮುಚ್ಚುವರು. ರಮೇಶ ಎಂ.ಎಚ್. ನಿರಾತಂಕ ನಾನು ಸತ್ತಾಗ ಜನ ಕಂಬನಿ ಮಿಡಿಯಲಿ ಎಂದು ಬದುಕುವುದಿಲ್ಲ.
ನಾನು ಗೆದ್ದಾಗ ಜನ ನನ್ನ ಹೊಗಳಲಿ ಎಂಬ ಆಸೆಯಿಲ್ಲ. ನನ್ನ ಆಸ್ತಿ ನೋಡಿ ನನಗೆ ಮರ್ಯಾದೆ ಕೊಡಲಿ ಎಂಬ ಬಯಕೆಯಿಲ್ಲ. ನಾನು ಪ್ರಾಮಾಣಿಕತೆಯ ದಾರಿಯಲ್ಲಿ ನಡೆದು ಸೋತರೆ ನನಗೆ ಭಯವಿಲ್ಲ. ಎಲ್ಲರಿಗೂ ಒಳ್ಳೆಯವನಾಗಬೇಕು, ನನ್ನ ಕೆಟ್ಟವನೆಂದುಕೊಂಡಾರು ಎಂಬ ಸಂಕಟ ನನ್ನ ಮನದಲ್ಲಿಲ್ಲ. ನಾನು ನಾನೆ, ನನಗೆ ನಾನೆ, ಬಂದದ್ದು ಹೋದದ್ದುರ ನಡುವೆ ಪ್ರೀತಿ, ವಿಶ್ವಾಸ, ಮಮತೆ, ಕರುಣೆ ಬುದ್ಧನ ಮಾರ್ಗದ ನಡತೆ. ರಮೇಶ ಎಂ.ಎಚ್. ನಿರಾತಂಕ ಮೂರ್ಖನ ಪ್ರಶ್ನೆಗಳಿಗೆ ಮೌನವೆ ಉತ್ತರವಾಗಬೇಕು
ಜಾಣನ ಪ್ರಶ್ನೆಗೆ ಜ್ಞಾನದ ಬೆಳಕು ಸಾಕು ಸ್ನೇಹಿತನ ಪ್ರಶ್ನೆಗಳಿಗೆ ಪ್ರೀತಿಯೆ ಸಾಕು ಅಜ್ಞಾನಿಯ ಪ್ರಶ್ನೆಗೆ ಮರು ಪ್ರಶ್ನೆಯು ಬೇಕು ನಿನ್ನ ಮನದ ಪ್ರಶ್ನೆಗಳಿಗೆ ಸದಾ ಉತ್ತರ ಹುಡುಕುತ್ತಿರಬೇಕು ಗೊಂದಲದ ಪ್ರಶ್ನೆಗೆ ಸುಮ್ಮನಿರಬೇಕು ಹುಡುಕುವಂತಿರಬೇಕು ಪ್ರಶ್ನೆ ಜ್ಞಾನವನು ಕೆಣಕುವಂತಿರಬಾರದು ಎದುರಾಳಿಯ ಕೋಪವನು. ರಮೇಶ ಎಂ.ಎಚ್. ನಿರಾತಂಕ ಇಷ್ಟ ಇಲ್ಲದಿರುವುದನ್ನು ಇಲ್ಲಾ ಎನಲು ನಿನಗೆ ಗೊತ್ತಿರಬೇಕು
ಸರಿ ಇರುವುದನ್ನು ಸರಿ ಎನಲು ಗುಂಡಿಗೆ ಇರಬೇಕು ಗೊತ್ತಿಲ್ಲದಿರುವುದನ್ನು ಗೊತ್ತಿಲ್ಲ ಎನಲು ನಾಚಿಕೆ ಬಿಡಬೇಕು ಒಮ್ಮೊಮ್ಮೆ ಇಲ್ಲಾ, ಹೌದು ಎನದೆ ಮೌನವಾಗಿರಲು ಬರಬೇಕು ವೈರಿಗಳನ್ನು ಕಣ್ಣಲ್ಲಿ ಕಣ್ಣನಿಟ್ಟು ಪ್ರೀತಿಯಿಂದಿರಲು ದ್ವೇಷ ಬಿಡಬೇಕು ಅವನು ಇವನು ಅಂದುಕೊಳ್ಳುವನೆಂದುಕೊಳ್ಳದೆ ಸ್ವಂತಿಕೆ ಇರಬೇಕು ಬೇಕೇಬೇಕು ಎನ್ನುವುದನು ಮಕ್ಕಳಂತೆ ಕೇಳಿ ಪಡೆಯಬೇಕು ತಪ್ಪು ಮಾಡಿ ಸಿಕ್ಕಿಹಾಕಿಕೊಂಡರೆ ಒಪ್ಪಿಕೊಳ್ಳಬೇಕು ಮುಂದುವರೆದು.... ರಮೇಶ ಎಂ.ಎಚ್. ನಿರಾತಂಕ ಬದುಕಬೇಕು ಪರರು ತಮ್ಮ ಎದೆಯ ನೋವನ್ನು ನಮ್ಮಲ್ಲಿ ಹಂಚಿಕೊಳ್ಳುವಂತೆ
ಸ್ನೇಹ ಇರಬೇಕು ಮುಖದ ಮುಖವಾಡ ಸರಿಸುವಂತೆ ಪ್ರೀತಿ ಇರಬೇಕು ಮನಸ್ಸಿನ ಕನ್ನಡಿಯಂತೆ ಎರಡು ದಿನದ ಬದುಕಿನಲ್ಲಿ ಬುದ್ಧಿವಂತಿಕೆಗಿಂತ ಹೃದಯವಂತಿಕೆ ಮೇಲು ಎಲ್ಲವನ್ನು ತಿಳಿದು ನಟಿಸಿ ಮೋಸಮಾಡಿ ಬದುಕು ಸಾಗಿಸಿದರೆ ಏನು ಫಲ ಇರುವುದ ಬರುವುದ ಒಪ್ಪಿ ನಡೆಯುವುದ ಕಲಿಯದಿದ್ದರೆ ಕತ್ತಲಲ್ಲಿ ಬಣ್ಣ ಹಚ್ಚಿ ಬಟ್ಟೆ ತೊಟ್ಟಂತೆ ರಮೇಶ ಎಂ.ಎಚ್. ನಿರಾತಂಕ ಪ್ರತಿ ವ್ಯಕ್ತಿ ಹುಡುಕುವನು
ಮತ್ತೊಬ್ಬರಲಿ ಇಲ್ಲದಿರುವುದನು ಸಂಬಂಧ ಹಾಳಾಗುವುದು ಸಮಸ್ಯೆ ಉದ್ಭವಿಸುವುದು ಇರುವುದನ್ನು ಹುಡುಕು ಸಾವಿರಾರು ಜನರಿಗೆ ಸಿಗಲು ಇಲ್ಲದಿರುವುದು ಹುಡುಕಿದರೆ ಸಿಗುವುದೇನು ಇರುವುದನ್ನು ಇರುವಂತೆಯೆ ಅಪ್ಪಿಕೊ ಬರುವುದನ್ನು ಬರುವಂತೆಯೆ ಒಪ್ಪಿಕೊ ಇಲ್ಲದ ದೇವರ ಹುಡುಕುವೆವು ಪ್ರೀತಿ ಸ್ನೇಹಗಳ ಮರೆವೆವು ಒಂದೆ ಕೋಣೆಯಲ್ಲಿ ಜೀವಿಸಿದರೂ ನಾವು ಮನಸ್ಸಿನಲ್ಲಿ ಸಾವಿರಾರು ಮೈಲಿಗಳ ದೂರನಿಲ್ಲುವೆವು ರಮೇಶ ಎಂ.ಎಚ್. ನಿರಾತಂಕ ಮುಂದೆ ಬಂದರೆ ಹಾಯದ
ಹಿಂದೆ ಬಂದರೆ ಒದೆಯದ ಮುಖ ಮನಸ್ಸಿನ ಕನ್ನಡಿಯಂತಿರದ ನರಿಯ ಬುದ್ಧಿಯ ಜನರು ಇರುವ ಜಗವಿದು ಜೊತೆಯಲ್ಲಿ ಇದ್ದವರು ಒಟ್ಟಿಗೆ ಉಂಡವರು ಸಂತಸದಿಂದ ಜೊತೆಗೆ ನಲಿದವರು ಕತ್ತಿ ಮಸೆವರು ಮನದಲ್ಲಿ ಎಂದು ಚುಚ್ಚುವರೊ ಗೊತ್ತಾಗುವುದಿಲ್ಲ ಸತ್ತ ಮೇಲೆ ಮೊಸಳೆ ಕಣ್ಣೀರ ಸುರಿಸುವರು ನರಿಯ ಬುದ್ಧಿಯ ಜನರು ರಮೇಶ ಎಂ.ಎಚ್. ನಿರಾತಂಕ ನನಗೆ ನನ್ನದೆ ಮನಸ್ಸಿದೆ
ನನಗೆ ನನ್ನದೆ ಕನಸ್ಸಿದೆ ಮನಸ್ಸು ಕನಸ್ಸಿನ ನಡುವೆ ಅಡೆ ತಡೆ ಬಂದರೆ ನಾ ಕುರುಡನಾಗುವೆ ಸದಾ ಕೇಳುವ ಕಿವಿ, ತೆರೆದ ಮನದಿಂದಿರುವೆ ಕಸ, ಕೊಳೆ ಸದ್ದು ಗದ್ದಲಕೆ ಕಿವುಡಾಗುವೆ ನಾ ನಡೆದದ್ದೆ ದಾರಿ ಕಲ್ಲು, ಮುಳ್ಳಿದ್ದರೂ ಸರಿ ಅಡ್ಡ ದಾರಿ ಹಿಡಿಯದೆ ತಲುಪುವೆನು ಗುರಿ ರಮೇಶ ಎಂ.ಎಚ್. ನಿರಾತಂಕ ಆಲೋಚನೆಗಳಿಗೆ ವೇದಿಕೆ
ದಿನವೂ ಎಡವುತ್ತಿದ್ದರೆ ಕಲಿಕೆ ಯಾರಾದರೂ ಬನ್ನಿ ನಿಮ್ಮ ಆಲೋಚನೆ ಹೊತ್ತು ತನ್ನಿ ಒಂಟಿಯಲ್ಲ ನಾವು ನೀವು ಜಗದಲ್ಲಿ ಜಗವ ಬೆಳಗಬೇಕು ಎಂಬ ಭಾವ ಮನದಲ್ಲಿ ರಮೇಶ ಎಂ.ಎಚ್. ನಿರಾತಂಕ ಟೀಕೆಗೆ ಅಂತರಂಗದ ಕದ ತಟ್ಟುವೆ
ಟೀಕೆ ಸರಿ ಎಂಬುದ ಅರಿತರೆ ನಮಿಸುವೆ ಸರಿಯಲ್ಲವೆಂದೆನಿಸಿದರೆ ಕ್ಷಮಿಸಿ ಮರೆವೆ ಟೀಕಿಸಲಿ, ಕೆಣಕಲಿ, ಗುರಾಯಿಸಲಿ ಅಳೆದು ತೂಗು ಅಂತರಂಗದಲಿ ರಮೇಶ ಎಂ.ಎಚ್. ನಿರಾತಂಕ ಅಳುವವರ ಮುಂದೆ ಅತ್ತು ನಟಿಸಿದೆ
ನಗುವವರ ಮುಂದೆ ನಕ್ಕು ನಟಿಸಿದೆ ನಗಬೇಕೆಂದಾಗ ನಗುವುದು ಮರೆತುಹೋಗಿದೆ ಅಳುಬಂದಾಗ ಅಳು ಬಾರದೆ ನನ್ನನೆ ನಾ ಮರೆತೆ ಜಗದ ಜಂಗಡದಲ್ಲಿ ನನ್ನತನವ ತೊರೆದೆ ಜನರ ಸಂಗಡದಲ್ಲಿ ಮನವ ಮರೆತೆ, ಮಾನವೀಯತೆ ಮರೆತೆ ಹಣವ ಅರಸುತ ಒಂಟಿ ನಿಂತೆ ನನ್ನವರು ದೂರ ಸರಿದುದ ದೊಡ್ಡಸ್ತಿಕೆ ಅಂದುಕೊಂಡೆ ಕೊನೆಗಳಿಗೆ ನನ್ನ ಜೀವನದ ಕದವ ತಟ್ಟಲು ಹೆದರಿಕೊಂಡೆ ಹತ್ತಿರವಿದ್ದು ದೂರ ನಿಂತ ನನ್ನತನವ ಶಪಿಸಿಕೊಂಡೆ ನಾ ಮಾಡಿದ ತಪ್ಪ ನೀ ಮಾಡಬೇಡ ಎಂದು ಹಂಚಿಕೊಂಡೆ ರಮೇಶ ಎಂ.ಎಚ್. ನಿರಾತಂಕ ಮಗನಿಗೆ ಬೇಕಿರುವುದೆಲ್ಲವ ಕೊಡಿಸಿ ಕೊಬ್ಬಿಸಿ
ಮನಸ್ಸಿಗೆ ಮೂಗುದಾರವ ತೊಡಿಸದೆ ಸಡಿಲಿಸಿ ಮಡದಿಯ ಮಾತೆಲ್ಲ ಕೇಳುತ ನಟಿಸಿ ತಂದೆ ತಾಯಿ ಕೊಡುವ ಸಲಹೆಗಳ ಧಿಕ್ಕರಿಸಿ ನನದೊಂದು ಜೀವನವೆಂದು ಜೀವಿಸಿ ಸಮಾಜ ಕೆಟ್ಟುಹಾಳಾಗಿ ಹೋಯಿತು ಎಂದು ಶಪಿಸಿ ಎಲ್ಲದರ ಸಹವಾಸವೇ ಬೇಡ ಎಂದು ಗುರಾಯಿಸಿ ನನಗೆ ನಾನೇ ಅರ್ಥವಾಗದೆ ಚಿಂತಿಸಿ ನಾನೊಬ್ಬ ಚಿಂತಕ ಎಂದು ಅನಿಸಿ ಅರಿವಿನ ಕದ ತಟ್ಟದೆ ಶವವಾಗಿ ಯಾತ್ರೆ ಮುಗಿಸಿ. ರಮೇಶ ಎಂ.ಎಚ್. ನಿರಾತಂಕ ಮಾಗಿದವರು ಆಗಿದ್ದು ಆಗಲಿ ಎಲ್ಲವನು ಸಹಿಸಿಕೊಂಡು,
ಹೊಟ್ಟೆಗೆ ಹಾಕಿಕೊಂಡು ತಣ್ಣಗಾಗುತ್ತಾರೆ ಮಾಗುತ್ತಿರುವವರು ಆಗಿಹೋಗಿದ್ದರ ಬಗ್ಗೆ ಸಹಿಸದೆ ಗೊಣಗುತ್ತಾರೆ ಎಳೆಕಾಯಿಗಳು ಯಾವುದನ್ನು ಆಲೋಚಿಸದೆ ತಾವಾಯಿತು ತಮ್ಮ ಕೆಲಸವಾಯಿತೆಂದು ಹಾಗೂ ಏನಾಯಿತು ಎಂಬುದರ ಬಗ್ಗೆ ಅರಿವಿರದೆ ಬದುಕುತ್ತಾರೆ ಮಾಗಿದವರ, ಮಾಗುತ್ತಿರುವವರ ಮತ್ತು ಎಳೆಕಾಯಿಗಳಲ್ಲಿ ನಾನ್ಯಾರು ಎಂದು ಕಂಡುಕೊಳ್ಳಬೇಕು ಮಾಗಿದ ನಿಮ್ಮತನವ ನೋಡಿ ಅನಿಸಿದ್ದು ನಾನು ಎಳೆಕಾಯಿ ಎಂದು ರಮೇಶ ಎಂ.ಎಚ್. ನಿರಾತಂಕ ನಡೆವ ದಾರಿಯಲ್ಲಿ
ಬರುವವರು ಬರಲಿ ದೂರ ಸರಿವವರು ಸರಿಯಲಿ ಬಿಟ್ಟು ಹೋದವರು ಮತ್ತೆ ಬಂದು ಸೇರಲಿ ಬಾಗಿಲು ಸದಾ ತೆರೆದಿದೆ ಅಪ್ಪಿ ಕಳುಹಿಸಲು ಮನವು ಸದಾ ತೆರೆದಿದೆ ಬರುವವರ ಅಪ್ಪಿಕೊಳ್ಳಲು ಸದಾ ಪ್ರೀತಿ, ಸ್ನೇಹ ಜೊತೆಯಿರಲಿ, ಅಗಲಲಿ ಗುರಿ ಒಂದೇ ನಮ್ಮ ಮುಂದೆ ನಮ್ಮ ಹೃದಯದಲ್ಲಿ ಸದಾ ನಾ ಹರಿವ ನದಿ ಹರಿದು ಹರಿದು ಸೇರುವೆ ಶರಧಿ ರಮೇಶ ಎಂ.ಎಚ್. ನಿರಾತಂಕ |
Categories
All
RAMESHA NIRATANKA ಉಲ್ಲಾಳು ವಾರ್ಡಿನ ಸಮಸ್ತ ನಾಗರೀಕರನ್ನು ಒಂದೇ ವೇದಿಕೆಯಡಿಯಲ್ಲಿ ತರಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಸಮಾಜದ ವಿವಿಧ ಕ್ಷೇತ್ರದ 50,000 ಕ್ಕೂ ಹೆಚ್ಚು ಸದಸ್ಯರು ನಿರಾತಂಕ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಒಡನಾಟದಲ್ಲಿದ್ದಾರೆ. ಹಲವಾರು ಸಮಾಜ ಸೇವಾ ಕಾರ್ಯಗಳಲ್ಲಿ ನಿರಾತಂಕ ಸಂಸ್ಥೆಗೆ ಬೆಂಬಲವನ್ನು ನೀಡುತ್ತಿದ್ದಾರೆ. ತಾವೂ ಕೂಡ ನಮ್ಮೊಂದಿಗೆ ಕೈ ಜೋಡಿಸಲು ಮತ್ತು ಬೆಂಬಲಿಸಲು “8088433026” ನಂಬರ್ಗೆ “NIRATHANKA” ಎಂದು ಸಂದೇಶವನ್ನು ಕಳುಹಿಸಿಕೊಡಬಹುದು.
|