ಅದು ಅಕಸ್ಮಾತಾಗಿ ಆದ ಪರಿಚಯ, ಸಮಾಜಕಾರ್ಯ ಕ್ಷೇತ್ರದಲ್ಲಿ ಅವರಿಗೆ ಅಗಾಧವಾದ ಪಾಂಡಿತ್ಯ, ದೆಹಲಿ ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದಲ್ಲಿ ಸಿಂಹಗಾಂಭೀರ್ಯದಿಂದ ಬದುಕಿದ್ದವರು, ಅಮೇರಿಕಾದಲ್ಲಿ ಆಗಿನ ಕಾಲಕ್ಕೆ ಉನ್ನತ ವ್ಯಾಸಂಗಕ್ಕೆ ಹೋಗಿದ್ದರಂತೆ, ಹೆಂಡತಿ ಅಂತರರಾಷ್ಟ್ರೀಯ ಮಟ್ಟದ ಲೇಖಕಿ, ಅವರ ಪುಸ್ತಕ ಆಗಿನ ಕಾಲಕ್ಕೆ Macmillan ಪಬ್ಲಿಕೇಷನ್ ನಿಂದ ಪ್ರಕಟಣೆಯಾಗಿತ್ತು. ನಿವೃತ್ತಿಯ ನಂತರ ವಿಜಯನಗರದಲ್ಲಿ ವಾಸವಾಗಿದ್ದರು, ಸಮಾಜಕಾರ್ಯ ಶಾಲೆಯ ಯಾರಾದರು ಕರೆದರೆ ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕು ಎಂಬುದು ಅವರ ಆಸೆ ಆದರೆ ಯಾರೂ ಅವರನ್ನು ಕರೆಯಲಿಲ್ಲ. ನಮ್ಮ ಸಮಾಜಕಾರ್ಯದ ಹೆಜ್ಜೆಗಳನ್ನು ನೋಡಿ ಪ್ರೀತಿ ತೋರಿದರು, ಆಗಾಗ ಭೇಟಿಯಾಗುವಂತೆ ಸೂಚಿಸಿದರು, ಪತ್ರಿಕೆಗೆಂದು ರೂ. 10000/- ನೀಡಿದರು, ಕೊನೆಯ ಆಸೆ ಅವರಿಗೆ ಅವರ ಪುಸ್ತಕ ಪ್ರಕಟಿಸಬೇಕೆಂಬುದಾಗಿತ್ತು, ನನಗೆ ಪ್ರಕಟಿಸುತ್ತೀಯ ಅಂದರು, ನಾನು ಖುಷಿಯಿಂದ ಒಪ್ಪಿಕೊಂಡೆ ಹಾಗೂ ಲಾಭ ಬಂದರೆ ಗೌರವಧನ ನೀಡುತ್ತೇನೆ ಎಂದು ಹೇಳಿದೆ, ನನಗೆ ಅವರು ಒಪ್ಪಿಗೆ ನೀಡಿದ ಸುಮಾರು ಒಂದು ವಾರದ ನಂತರ ಪ್ರಸಿದ್ಧವಾದ ಪ್ರಕಾಶನ ಸಂಸ್ಥೆ ಅವರನ್ನು ಸಂಪರ್ಕಿಸಿ ದೊಡ್ಡ ಮೊತ್ತದ ಗೌರವಧನ ನೀಡುತ್ತೇವೆ, ನಿಮ್ಮ ಪುಸ್ತಕ ನಮಗೆ ಪ್ರಕಾಶನ ಮಾಡಲು ಅವಕಾಶ ಕೊಡಿ ಎಂದರು, ಬೇರೆಯವರಾಗಿದ್ದರೆ ಹಣದ ಆಸೆಗೆ ಅವರಿಗೆ ಪ್ರಕಟಿಸಲು ಅನುಮತಿ ನೀಡಿಬಿಡುತ್ತಿದ್ದರು. ಆದರೆ ಅವರು ನಾನು ಮಾತು ಕೊಟ್ಟಿದ್ದೇನೆ ಹಾಗಾಗಿ ರಮೇಶ ರವರಿಗೆ ಪುಸ್ತಕ ಪ್ರಕಟಿಸಲು ನೀಡುತ್ತೇನೆ ಎಂದು ಅವರಿಗೆ ಪತ್ರ ಬರೆದು ಕಳುಹಿಸಿದರು, ಪುಸ್ತಕ ಪ್ರಿಂಟ್ಗೆ ಹೋಗುವ ಮೊದಲು ಇರಲಿ ಎಂದು 50000/- ಹಣ ಕೊಟ್ಟರು. ನಾನು ಬೇಡವೆಂದೆ, ಆದರೂ ಇದು ಸಾಲವೆಂದುಕೊಂಡು ತೆಗೆದುಕೊ ಸಾಧ್ಯವಾದರೆ ವಾಪಸ್ಸು ಮಾಡು ಇಲ್ಲವಾದರೆ ಕೊಡಬೇಡ ಅಂದರು. ಬಲವಂತವಾಗಿ ನನಗೆ ಹಣ ನೀಡಿದರು, ಪುಸ್ತಕ ಹೊರಬಂತು. ಪುಸ್ತಕ ನೋಡಿ ಅವರಿಗೆ ಅತೀವ ಆನಂದವಾಯಿತು, ದುಬಾರಿಯಾದರೂ ಅದ್ದೂರಿಯಾದ casebind ಮಾಡಿ ಹೊರತಂದಿದ್ದೆವು. ಅದಾದನಂತರ ನಾನು ಇದುವರೆವಿಗೂ 500 ಪುಸ್ತಕಗಳನ್ನು ಪ್ರಿಂಟ್ ಮಾಡಿಸಿದ್ದೇನೆ, ಯಾವ ಪುಸ್ತಕವನ್ನು casebind ಮಾಡಿಸಲಿಲ್ಲ, ನಿನಗೆ ವ್ಯವಹಾರ ಜ್ಞಾನವಿಲ್ಲ ಎಂದು ಬೈದರು.
ಬ್ರಾಹ್ಮಣರಾದಾಗ್ಯೂ ಮಾಂಸ ತಿಂದ ಸಂಗತಿ ಅವರ ಯೌವನದ ದಿನಗಳು, ಬೇರೆಯವರು ರಮೇಶನಿಗೆ ಯಾಕೆ ನೀವು ಸಹಾಯ ಮಾಡುತ್ತೀರ ಎಂದದ್ದು, ಎಲ್ಲವನ್ನೂ ಆಗಾಗ್ಗೆ ಹಂಚಿಕೊಳ್ಳುತ್ತಿದ್ದರು, ಒಮ್ಮೆ ಅವರಿಗೆ ಇಷ್ಟವಾದ ಮಾಂಸದ ಹೋಟೆಲ್ಗೆ ಕರೆದುಕೊಂಡು ಹೋಗಿ ಊಟ ಕೊಡಿಸಿದರು. ಅವರಿಗೆ ಮಕ್ಕಳಿರಲಿಲ್ಲ. ಪುಸ್ತಕದ ಹಕ್ಕುಗಳನ್ನು ನನ್ನ ಹೆಸರಿಗೆ ಬರೆದುಕೊಟ್ಟರು, ಅವರ ಪುಸ್ತಕ National Book Trust ನಿಂದ ಆಯ್ಕೆಯಾಗಿ ಗೌರವಧನ ನೀಡಿ ಮರುಮುದ್ರಣ ಮಾಡುವಂತೆ ಸೂಚಿಸಿದರು, ಪ್ರಕಾಶಕನಾದ ನನಗೂ NBT ಸ್ವಲ್ಪ ಹಣ ನೀಡಿದರು, ಅವರಿಂದ ಸಾಲ ಪಡೆದ ಹಣ ಮರುಪಾವತಿಸಲು ಅವರು ಒಪ್ಪುವುದಿಲ್ಲವೆಂದು ಗೊತ್ತಿದ್ದರೂ ಕೊಡಲು ಹೋದೆ ಅವರು ಅದನ್ನು ಸ್ವೀಕರಿಸಲಿಲ್ಲ, ಮತ್ತೊಂದು ಪುಸ್ತಕ ಮುದ್ರಿಸಲು ಆದೇಶಿಸಿದರು. ಒಟ್ಟು 3 ಪುಸ್ತಕಗಳು ಪ್ರಕಟಿಸಿದರು. ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ಅವರೇ ಸೂಚಿಸಿದಂತೆ ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಎಸ್. ದೊರೆಸ್ವಾಮಿ, ಅನಿತಾ ರೆಡ್ಡಿ (ಮಾಜಿ ಮುಖ್ಯಮಂತ್ರಿಯೊಬ್ಬರ ಸೊಸೆ ಹಾಗೂ ಅವರ ಮಗ ತಿಥಿ ಚಲನಚಿತ್ರದ ನಿರ್ಮಾಪಕ ಇರಬಹುದು) ಅವರದೆ ಪುಸ್ತಕಕ್ಕೆ ಅವರ ಪತ್ನಿಗೂ ಅವರ ಸ್ನೇಹಿತರಿಗೂ ಹಾಗೂ ಬಂಧುಗಳಿಗೂ ತಿಳಿಸಿರಲಿಲ್ಲ. ಒಬ್ಬರೆ ಬಂದರು, ಸಭಾಂಗಣದಲ್ಲಿ ಸುಮಾರು 10 ಜನರಿದ್ದರು, ಅದರಲ್ಲಿ ನಮ್ಮ ಆಫೀಸ್ನವರೆ ಸುಮಾರು 5 ಜನ, ನನ್ನ ಸ್ನೇಹಿತರು 5 ಜನರಿದ್ದರು ಎನಿಸುತ್ತೆ, ಸರಿಯಾದ ಸಮಯಕ್ಕೆ ಕಾರ್ಯಕ್ರಮ ಶುರು ಮಾಡಿ ಎಂದರು, ನಾನು ಕಾರ್ಯಕ್ರಮ ನಿರೂಪಕನಾಗಿ ಕೆಲವೇ ಕೆಲವು ಜನರನ್ನು ನೋಡಿ ಬೇಸರ, ದುಗುಡ, ಅವಮಾನವೆಂಬಂತೆ ಗಂಟಲು ಬಿಗಿಯಾಯಿತು, ಪ್ರಾರ್ಥನೆ ಮಾಡಿ ಮುಗಿಸುವಷ್ಟರ ಹೊತ್ತಿಗೆ ಇನ್ನೊಂದು ಐದು ಜನ ಬಂದರು ಎನಿಸುತ್ತೆ, ಕಾರ್ಯಕ್ರಮ ಶುರುಮಾಡಿದ ನಂತರ ದೊರೆಸ್ವಾಮಿರವರು ಅಲ್ಲಿಂದ ಕೇವಲ 15 ಜನರನ್ನು ಉದ್ದೇಶಿಸಿ 1 ತಾಸು, ನಂತರ ಅನಿತಾರೆಡ್ಡಿರವರು ಪುಸ್ತಕ ಕುರಿತು 1 ತಾಸು ಮಾತನಾಡಿದರು, ಅವರಿಬ್ಬರ ಮಾತು ಕೇಳಿ ಲೇಖಕ ಪಾಠಕ್ ಅತೀವ ಸಂತಸದಲ್ಲಿದ್ದರು, ಅಂದು ನನಗೆ ಜಾಸ್ತಿ ಜನರಿದ್ದರೆ ಮಾತ್ರ ಸಮಾರಂಭ ಯಶಸ್ವಿಯಾಗಿ ನೆರವೇರಿದಂತೆ ಎನ್ನುವ ಭ್ರಮೆ ಕಳಚಿ ಬಿತ್ತು, ಈ ರೀತಿಯ ಜೀವನದ ಪಾಠಗಳು ನನ್ನನ್ನು ಗಟ್ಟಿಗೊಳಿಸಿದ ಸಂದರ್ಭಗಳು ಹಲವು. ಈಗ ಶಂಕರ ಪಾಠಕ್ ರವರು ನೆನಪು ಮಾತ್ರ.... ರಮೇಶ ಎಂ.ಎಚ್. ನಿರಾತಂಕ
0 Comments
Leave a Reply. |
Categories
All
RAMESHA NIRATANKA ಉಲ್ಲಾಳು ವಾರ್ಡಿನ ಸಮಸ್ತ ನಾಗರೀಕರನ್ನು ಒಂದೇ ವೇದಿಕೆಯಡಿಯಲ್ಲಿ ತರಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಸಮಾಜದ ವಿವಿಧ ಕ್ಷೇತ್ರದ 50,000 ಕ್ಕೂ ಹೆಚ್ಚು ಸದಸ್ಯರು ನಿರಾತಂಕ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಒಡನಾಟದಲ್ಲಿದ್ದಾರೆ. ಹಲವಾರು ಸಮಾಜ ಸೇವಾ ಕಾರ್ಯಗಳಲ್ಲಿ ನಿರಾತಂಕ ಸಂಸ್ಥೆಗೆ ಬೆಂಬಲವನ್ನು ನೀಡುತ್ತಿದ್ದಾರೆ. ತಾವೂ ಕೂಡ ನಮ್ಮೊಂದಿಗೆ ಕೈ ಜೋಡಿಸಲು ಮತ್ತು ಬೆಂಬಲಿಸಲು “8088433026” ನಂಬರ್ಗೆ “NIRATHANKA” ಎಂದು ಸಂದೇಶವನ್ನು ಕಳುಹಿಸಿಕೊಡಬಹುದು.
|