ಅದೊಮ್ಮೆ ಅಂತರ್ಜಾಲ ತಾಣದಲ್ಲಿ ಓದಿದ ನೆನಪು. ಒಬ್ಬ ಗೃಹಿಣಿ ಒಂದು ಸುಂದರವಾದ ಹೂವಿನ ಗಿಡವನ್ನು ಮನೆಗೆ ತರುತ್ತಾರೆ. ಸುಮಾರು 2 ವರ್ಷಗಳ ಕಾಲ ನೀರನ್ನು ಹಾಕುತ್ತಾ ಪೋಷಣೆ ಮಾಡುತ್ತಾರೆ. ಆದರೆ ಆ ಹೂವಿನ ಗಿಡದಲ್ಲಿ ಯಾವುದೇ ಬೆಳವಣಿಗೆ ಕಂಡುಬರುವುದಿಲ್ಲ. ಅವರು ಆ ಹೂವಿನ ಗಿಡದಲ್ಲಿ ಯಾವುದೇ ಬದಲಾವಣೆ ಕಂಡುಬಾರದಿದ್ದಾಗ ಅನುಮಾನ ಬಂದು ಗಿಡವನ್ನು ಕುಂಡದಿಂದ ಬೇರ್ಪಡಿಸಿ ನೋಡುತ್ತಾರೆ. ಆಗ ಅವರಿಗೆ ತಿಳಿದದ್ದು ಅವರು ಮನೆಗೆ ತಂದು ಬೆಳೆಸಿದ್ದು ಪ್ಲಾಸ್ಟಿಕ್ ನಿಂದ ಮಾಡಿದ ನೈಜ ಹೂ ಗಿಡದಂತೆ ಭಾಸವಾಗುವ ಪ್ಲಾಸ್ಟಿಕ್ ಹೂವಿನ ಗಿಡ. ಆದರೆ ನೈಜ ಹೂವಿನ ಗಿಡದಂತೆ ಕಾಣಿಸುತ್ತಿರುತ್ತದೆ. ನೈಜ ಗಿಡದ ಪಕ್ಕ ಅದನ್ನು ಇಟ್ಟು ಹೋಲಿಸಿ ನೋಡಿದರೆ ಅದು ಪ್ಲಾಸ್ಟಿಕ್ ಗಿಡ ಎಂಬಂತೆ ಯಾವುದೇ ಅನುಮಾನ ಬಾರದಿರುವುದು ಅಚ್ಚರಿ ಮೂಡಿಸುತ್ತದೆ.
ಹಾಗೆಯೇ ಸಂಬಂಧಗಳಲ್ಲಿಯೂ ನಮಗೆ ಪ್ಲಾಸ್ಟಿಕ್ ಗಿಡದಂತಹ ಸಂಬಂಧಗಳಿರುತ್ತವೆ. ನಾವು ಅಗಾಧವಾಗಿ ನಮ್ಮ ಸಂಬಂಧಗಳನ್ನು ಅತ್ಯಂತ ಪ್ರಾಮಾಣಿಕತೆಯಿಂದ ಕೂಡಿವೆ ಎಂದುಕೊಳ್ಳುತ್ತೇವೆ. ಆದರೆ ಕೆಲವು ಅಗ್ನಿ ಪರೀಕ್ಷೆಗಳು ಒದಗಿಬಂದಾಗ ನಮ್ಮ ಸಂಬಂಧಗಳು ಪ್ಲಾಸ್ಟಿಕ್ ಗಿಡದಂತೆ ನೈಜವಾದ ಸಂಬಂಧಗಳಲ್ಲ ಎಂದು ಅನಿಸಿಬಿಡುತ್ತದೆ. ಮನುಷ್ಯ ಬಟ್ಟೆ ತೊಡುವಷ್ಟು ಸುಲಭವಾಗಿ ಮುಖವಾಡವನ್ನು ತೊಡಬಲ್ಲ. ನೈಜವಾಗಿ ಪ್ರೀತಿಸುತ್ತಿದ್ದೇನೆ ಎಂಬಂತೆ ನಟಿಸಿ ನಂಬಿಸಬಲ್ಲ. ನಂಬಿಸಿ ನಡುನೀರಿನಲ್ಲಿ ಕೈಕೊಡಲೂ ಬಲ್ಲ. ಒಳಗೆ ಅಳುತ್ತಾ ನಗುಮುಖದಿಂದ ಮಾತನಾಡಲೂ ಬಲ್ಲ. ಒಳಗೆ ಕತ್ತಿ ಮಸೆದು ತನ್ನ ಕಾರ್ಯವನ್ನು ಸಾಧಿಸಿಕೊಂಡು ದ್ವೇಷವನ್ನು ಸಾಧಿಸಲೂ ಬಲ್ಲ. ಇತ್ತೀಚಿನ ಆಧುನಿಕ ಜಗತ್ತಿನಲ್ಲಿ ನಮ್ಮ ಸಂಪರ್ಕದಲ್ಲಿರುವ ಬಹುಪಾಲು ಜನರು ಇದೇ ರೀತಿ ಮುಖವಾಡ ಹೊತ್ತು ನಟಿಸುತ್ತಿರುತ್ತಾರೆ. ನಟಿಸಲೇ ಬೇಕಾದ ಅನಿವಾರ್ಯತೆ ಒದಗಿಬಂದು ಬಿಡುತ್ತದೆ. ಇನ್ನು ಬಹುಪಾಲು ಜನ ನಾವು ನಟಿಸದೆ ಇರದ ದಿನಗಳೇ ಇಲ್ಲ ಎಂದರೆ ತಪ್ಪಾಗಲಾರದು. ಆದರೆ ಕೆಲವೇ ಕೆಲವರು ನೈಜವಾಗಿ ಬದುಕನ್ನು ಸಾಗಿಸುತ್ತಿರುವವರೂ ನಮ್ಮ ಜೊತೆಯಲ್ಲೇ ಇರುತ್ತಾರೆ. ಅವರನ್ನು ಗುರುತಿಸಿ ಅವರೊಂದಿಗೆ ಸ್ನೇಹ, ವ್ಯವಹಾರ ಮಾಡಲು ನಾವುಗಳು ಕಲಿತುಕೊಳ್ಳಬೇಕಷ್ಟೆ. Honesty saves everyones time ಎಂಬಂತೆ ಬದುಕಲು ನಮಗೆ ಅತ್ಯಂತ ಕಷ್ಟಕರವಾದ ದಿನಗಳಲ್ಲಿ ನಾವು ಬದುಕುತ್ತೇವೆ. ಅಕಸ್ಮಾತ್ ಒಮ್ಮೆ ನಿಮ್ಮ ಸ್ನೇಹಿತರಿಗೆ ಹಣ ಕೊಡಿ. ಅವನು ಹಣವನ್ನು ತೆಗೆದುಕೊಂಡು ಮೋಸ ಮಾಡಿ ಓಡಿ ಹೋದರೆ ಜನ ಓಡಿ ಹೋದವನನ್ನು ಬಯ್ಯುವುದು ಕಡಿಮೆ. ಸ್ನೇಹವನ್ನು ನಂಬಿ ಹಣ ಕೊಟ್ಟ ನಿಮ್ಮನ್ನೇ ಬಯ್ಯುವುದು. ಇದು ಸಾಮಾನ್ಯ. ವ್ಯವಹಾರ ಮಾಡಲು ಗೊತ್ತಿರದ ಮೂರ್ಖನೆಂದು ಜನ ಹಣ ಕೊಟ್ಟವನನ್ನೇ ನಿಂದಿಸುತ್ತಾರೆ ಅಲ್ಲವೇ. ಸ್ನೇಹಕ್ಕೆ ನಂಬಿ ಹಣ ಕೊಟ್ಟೆಯಲ್ಲ ಶಹಭಾಷ್ ಎಂದು ಯಾರೂ ನಿಮ್ಮನ್ನು ಹೊಗಳುವುದಿಲ್ಲ. ಹಾಗಾಗಿ ಪ್ಲಾಸ್ಟಿಕ್ ಸಂಬಂಧಗಳ ಬಗ್ಗೆ ಎಚ್ಚರಿಕೆ ಸೂಕ್ತ ಎಂದು ಅನಿಸುತ್ತದೆ. ವಂದನೆಗಳೊಂದಿಗೆ ರಮೇಶ ಎಂ.ಎಚ್. www.socialworkfootprints.org
0 Comments
Leave a Reply. |
Categories
All
RAMESHA NIRATANKA ಉಲ್ಲಾಳು ವಾರ್ಡಿನ ಸಮಸ್ತ ನಾಗರೀಕರನ್ನು ಒಂದೇ ವೇದಿಕೆಯಡಿಯಲ್ಲಿ ತರಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಸಮಾಜದ ವಿವಿಧ ಕ್ಷೇತ್ರದ 50,000 ಕ್ಕೂ ಹೆಚ್ಚು ಸದಸ್ಯರು ನಿರಾತಂಕ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಒಡನಾಟದಲ್ಲಿದ್ದಾರೆ. ಹಲವಾರು ಸಮಾಜ ಸೇವಾ ಕಾರ್ಯಗಳಲ್ಲಿ ನಿರಾತಂಕ ಸಂಸ್ಥೆಗೆ ಬೆಂಬಲವನ್ನು ನೀಡುತ್ತಿದ್ದಾರೆ. ತಾವೂ ಕೂಡ ನಮ್ಮೊಂದಿಗೆ ಕೈ ಜೋಡಿಸಲು ಮತ್ತು ಬೆಂಬಲಿಸಲು “8088433026” ನಂಬರ್‌ಗೆ “NIRATHANKA” ಎಂದು ಸಂದೇಶವನ್ನು ಕಳುಹಿಸಿಕೊಡಬಹುದು.
|