ಐ.ಎ.ಎಸ್. ಅಧಿಕಾರ ಮತ್ತು ಸಾಮಾಜಿಕ ಸ್ಥಾನಮಾನ, ಎದುರಲ್ಲಿ ಕಂಡರೆ ಸಾಕು ಎದ್ದು ನಿಂತು ಕೈ ಮುಗಿವ ಜನ, ಅಬ್ಬಾ! ನೆನೆಸಿಕೊಂಡರೆ ಏನೋ ಒಂದು ತರಹದ ಸಂತೋಷ. ಇಂತಹ ಅಧಿಕಾರ, ಗೌರವ, ಮನ್ನಣೆಗಳನ್ನು ಬೇಡವೆನ್ನುವುದು ಯಾರಿಗಾದರು ಸಾಧ್ಯವೇ? ಇಲ್ಲಪ್ಪ ಎನ್ನುವುದು ಸಾಮಾನ್ಯವಾಗಿ ಎಲ್ಲರ ಬಾಯಿಯಿಂದ ಕೇಳಿಬರುವ ಉತ್ತರ. ಆ ರೀತಿಯ ತೀರ್ಮಾನ ತೆಗೆದುಕೊಳ್ಳುವ ದಿಟ್ಟತನ ಕೇವಲ ಅಪರೂಪ ಮತ್ತು ಅಸಾಧ್ಯರು ಎನಿಸುವಂತಹ ಕೆಲವೇ ಕೆಲವು ವ್ಯಕ್ತಿಗಳಿಗೆ ಮಾತ್ರ ಸಾಧ್ಯ. ಅಂತಹ ಅಸಮಾನ್ಯರ ಸಾಲಿನಲ್ಲಿ ಸೇರಿಸಬಹುದಾದಂತ ಹೆಸರೇ “ಅರುಣಾರಾಯ್”. ಇವರನ್ನು ಸಮಾಜ ಕಾರ್ಯದ ಅರುಣೋದಯ ಎಂದರೆ ತಪ್ಪಾಗಲಾರದು. ಇವರು ತಮ್ಮ ಜಾಣ್ಮೆ, ಬುದ್ದಿಶಕ್ತಿಗೆ ದೊರೆತ ಐ.ಎ.ಎಸ್. ಅಧಿಕಾರ ತೊರೆದು ಸಾಮಾಜಿಕ ಕಾರ್ಯಕರ್ತೆಯಾಗಿ ಸಲ್ಲಿಸಿದ ಸೇವೆ, ಕೊಡುಗೆ ಅಪಾರ. ಚೆನ್ನೈನಲ್ಲಿ ಹುಟ್ಟಿ, ದೆಹಲಿಯಲ್ಲಿ ಬೆಳೆದ ಅರುಣಾ 1968ರಲ್ಲಿ ಐ.ಎ.ಎಸ್. ಪಾಸು ಮಾಡಿ. ಆರು ವರ್ಷಗಳ ಕಾಲ ಅಧಿಕಾರಿಯಾಗಿ ಸೇವೆಸಲ್ಲಿಸಿದರು. ನಂತರ ತನ್ನ ಪತಿ ಸಂಜಿತ್ `ಬಂಕರ್' ರಾಯ್ ಅವರು ರಾಜಾಸ್ತಾನದ ತಿಲೋನಿಯಾದಲ್ಲಿ ನಡೆಸುತ್ತಿದ್ದ ಸಾಮಾಜಿಕ ಕಲ್ಯಾಣ ಸಂಶೋಧನಾ ಸಂಸ್ಥೆಯನ್ನು ಸೇರಿದರು. ನಂತರ 1983ರಲ್ಲಿ ಸಾಮಾಜಿಕ ಕಲ್ಯಾಣ ಸಂಶೋಧನಾ ಸಂಸ್ಥೆಯನ್ನು ತೊರೆದು 80ರ ದಶಕದ ಕೊನೆಯ ಭಾಗದಲ್ಲಿ ಅರುಣಾ ಮತ್ತು ಅವರ ಸಹೋದ್ಯೋಗಿ ಶಂಕರ್ ಸಿಂಗ್‌ರು “ಮಜ್ದೂರ್ ಕಿಸಾನ್ ಶಕ್ತಿ ಸಂಘಟನ್”ಸ್ಥಾಪಿಸಿದರು. ಗ್ರಾಮೀಣ ಜನತೆಗೆ ಅವರ ಹಕ್ಕುಗಳನ್ನು ತಿಳಿಸಲು ಈ ಸಂಘಟನೆ ಪ್ರಯತ್ನಿಸಿತು. ಈ ಪ್ರಕ್ರಿಯೆಯಲ್ಲಿಯೇ ಮಾಹಿತಿ ಹಕ್ಕು ಎಂಬ ಪರಿಕಲ್ಪನೆಯೂ ಹುಟ್ಟಿಕೊಂಡಿತು. ಈ ಸಂಘಟನೆಯ ನೇತೃತ್ವದಲ್ಲಿ ಹಲವಾರು ಹೋರಾಟಗಳು ಧರಣಿಗಳನ್ನು ನಡೆಸಲಾಯಿತು.
ಸರ್ಕಾರಿ ಯೋಜನೆಗಳಿಗಾಗಿ ಕೆಲಸ ಮಾಡುವ ಸ್ಥಳೀಯ ಜನರಿಗೆ ಕಾನೂನಿನ ಪ್ರಕಾರ ನೀಡಬೇಕಾದ ಕನಿಷ್ಠ ವೇತನ ನೀಡಲು ಒತ್ತಾಯಿಸಲಾಯಿತು. ಅಭಿವೃದ್ಧಿ ಯೋಜನೆಗಳ ಅಧಿಕೃತ ದಾಖಲೆಗಳನ್ನು ಬಯಲು ಮಾಡುವ ಪ್ರಯತ್ನ ಮತ್ತು ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲನೆ ಮಾಡಿದಾಗ ದಿಗ್ಭ್ರಮೆಯಾಗುಷ್ಟು ಸತ್ಯಗಳು ಹೊರಬಂದವು. ಶಾಲೆ, ಆಸ್ಪತ್ರೆ, ಶೌಚಾಲಯಗಳಿಗಾಗಿ ಸರ್ಕಾರದಿಂದ ಹಣ ಮಂಜೂರಾಗಿದ್ದರೂ, ಅವುಗಳು ನಿರ್ಮಾಣವಾಗಿರುವ ಬಗ್ಗೆ ಸಾಕಷ್ಟು ದಾಖಲೆಗಳಿದ್ದರೂ ವಾಸ್ತವದಲ್ಲಿ ಅದ್ಯಾವುದೂ ಇರಲಿಲ್ಲ. ಸತ್ತ ವ್ಯಕ್ತಿಗಳ ಹೆಸರಿನಲ್ಲಿ ಸಂಬಳ ನೀಡಿರುವುದಾಗಿ ದಾಖಲೆಗಳು ಸೃಷ್ಟಿಯಾಗಿದ್ದವು. ಇವು ಸಾರ್ವಜನಿಕ ಹಣ ದುರುಪಯೋಗವಾಗುತ್ತಿರುವುದರ ಸ್ವಷ್ಟ ಚಿತ್ರಣ ನೀಡಿತ್ತು. ಇದನ್ನೇ ಬಂಡವಾಳವನ್ನಾಗಿಟ್ಟುಕೊಂಡ ಅರುಣಾ ಮತ್ತವರ ತಂಡ ಜನರಲ್ಲಿ ಮಾಹಿತಿ ಹಕ್ಕಿನ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸಲು ಅನುವಾಯಿತು. ದೇಶದ ಪ್ರತಿಯೊಬ್ಬ ಪ್ರಜೆಗೂ ತಮ್ಮ ನಾಯಕರ ಬಳಿ ದೇಶಕ್ಕೆ ಸಂಬಂಧಿಸಿದ ಯಾವುದೇ ವಿಷಯದ ಬಗ್ಗೆ ಮಾಹಿತಿ ಕೇಳುವ ಹಕ್ಕಿದೆ ಎನ್ನುವುದು ಅರುಣಾರವರ ವಾದವಾಗಿತ್ತು. ಇವರ ಈ ವಾದ ಮುಂದೆ ಜನತಾ ಆಂದೋಲನವಾಗಿ ಪರಿಣಮಿಸಿತು. ಪ್ರಧಾನ ಮಂತ್ರಿ ರಾಜೀವ್ ಗಾಂಧಿಯವರ ಹೇಳಿಕೆಯಂತೆ ಕೇಂದ್ರ ಸರ್ಕಾರವು ಬಿಡುಗಡೆ ಮಾಡುವ ಒಂದು ರೂಪಾಯಿಯು ಹಳ್ಳಿಯನ್ನು ತಲುಪುವಷ್ಟರಲ್ಲಿ 15 ಪೈಸೆಯಾಗಿರುತ್ತದೆ. ಹಾಗಾದರೆ ಉಳಿದ 85 ಪೈಸೆ ಎಲ್ಲಿ ಹೋಗುತ್ತದೆ. ಹೀಗೆ ನಂತರದ ದಿನಗಳಲ್ಲಿ ಮಾಹಿತಿ ಹಕ್ಕನ್ನು ಒಂದು ಕಾಯಿದೆಯಾಗಿಸುವ ತಮ್ಮ ಗುರಿಯನ್ನು ಅಂತಿಮವಾಗಿ ಅರುಣಾ 2005ರಲ್ಲಿ ನನಸಾಗಿಸಿದರು. ಇದಕ್ಕೂ ಸಾಕಷ್ಟು ಮುಂಚೆಯೇ 2000ರಲ್ಲಿ ಅವರ ಸಾಮುದಾಯಿಕ ನಾಯಕತ್ವಕ್ಕಾಗಿ “ಮ್ಯಾಗ್ಸೆಸೆ ಪ್ರಶಸ್ತಿ ಗೌರವ” ಬಂದಿತು. ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಸ್ವೀಕರಿಸಿದ ಆಧುನಿಕ ಭಾರತದ 50 ಮಹಿಳೆಯರಲಿ ಅರುಣಾ ಕೂಡ ಒಬ್ಬರಾಗಿರುವುದು ಹೆಮ್ಮೆಯ ಸಂಗತಿ. ಪ್ರಶಸ್ತಿಯಿಂದ ದೊರೆತ ಗೌರವ ಧನವಾಗಿ ದೊರೆತ 50 ಸಾವಿರ ಅಮೆರಿಕಾ ಡಾಲರ್‌ಗಳನ್ನು ಪ್ರಜಾತಾಂತ್ರಿಕ ಹೋರಾಟಗಳನ್ನು ಬೆಂಬಲಿಸುವ ಟ್ರಸ್ಟ್ಗೆ ಬಳಸಿದರು. 2004ರಲ್ಲಿ ಸೋನಿಯಗಾಂಧಿ ನೇತೃತ್ವದ ಕಾಂಗ್ರೇಸ್ ಪಕ್ಷ ಕೇಂದ್ರದಲ್ಲಿ ಆಡಳಿತ ಚುಕ್ಕಾಣಿ ಹಿಡಿದಂದು ಅರುಣಾರವರು “ರಾಷ್ಟ್ರೀಯ ಸಲಹಾ ಸಮಿತಿ”ಯ ಸದಸ್ಯರಾಗಿ ಆಯ್ಕೆಯಾದರು ಮತ್ತು ಆರ್.ಟಿ.ಐ. ಆಕ್ಟ್ನ ರಚನೆಯಲ್ಲಿ ಮುಖ್ಯ ಪಾತ್ರವಹಿಸಿದರು. 2005ರಲ್ಲಿ ವಿವಿಧ ಮಹಿಳಾ ಸಂಘ ಸಂಸ್ಥೆಗಳು ಒಟ್ಟುಗೂಡಿ ನೊಬೆಲ್ ಪಾರಿತೋಷಕವನ್ನು ಸಮಾಜ ಸೇವೆಯಲ್ಲಿ ಅದ್ವಿತೀಯ ಸಾಧನೆಗೈದ ಮಹಿಳಾ ಸಾಧಕರಿಗೆ ನೀಡುವ ಉದ್ದೇಶದಿಂದ 150 ದೇಶಗಳಲ್ಲಿ ನಡೆಸಿದ ಹುಡುಕಾಟದಲ್ಲಿ ಒಟ್ಟು 1000 ಮಹಿಳಾಮಣಿಗಳ ಹೆಸರುಗಳು ನೊಂದಾಯಿತವಾದವು ಅದರಲ್ಲಿ ಶ್ರೀಮತಿ ಅರುಣಾರಾಯ್‌ರವರ ಹೆಸರು ಸೇರಿತ್ತು ಎನ್ನುವುದು ಹೆಮ್ಮೆಯ ವಿಷಯ. “ಅರುಣಾ ರಾಯ್- ಸಮಾಜಕಾರ್ಯದ ಸಾರಥಿ, ವೃತ್ತಿನಿರತ ಸಮಾಜಕಾರ್ಯಕರ್ತರೆಲ್ಲರಿಗೊಂದು ಮಾದರಿ.”
0 Comments
Leave a Reply. |
Categories
All
RAMESHA NIRATANKA ಉಲ್ಲಾಳು ವಾರ್ಡಿನ ಸಮಸ್ತ ನಾಗರೀಕರನ್ನು ಒಂದೇ ವೇದಿಕೆಯಡಿಯಲ್ಲಿ ತರಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಸಮಾಜದ ವಿವಿಧ ಕ್ಷೇತ್ರದ 50,000 ಕ್ಕೂ ಹೆಚ್ಚು ಸದಸ್ಯರು ನಿರಾತಂಕ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಒಡನಾಟದಲ್ಲಿದ್ದಾರೆ. ಹಲವಾರು ಸಮಾಜ ಸೇವಾ ಕಾರ್ಯಗಳಲ್ಲಿ ನಿರಾತಂಕ ಸಂಸ್ಥೆಗೆ ಬೆಂಬಲವನ್ನು ನೀಡುತ್ತಿದ್ದಾರೆ. ತಾವೂ ಕೂಡ ನಮ್ಮೊಂದಿಗೆ ಕೈ ಜೋಡಿಸಲು ಮತ್ತು ಬೆಂಬಲಿಸಲು “8088433026” ನಂಬರ್‌ಗೆ “NIRATHANKA” ಎಂದು ಸಂದೇಶವನ್ನು ಕಳುಹಿಸಿಕೊಡಬಹುದು.
|