ಬೆಳಿಗ್ಗೆ 5.00 ಗಂಟೆಗೆ ಎಂದಿನಂತೆ ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಸುತ್ತು ಹೊಡೆಯುವ ಅಭ್ಯಾಸ. ಪ್ರತಿ ದಿನ ನನಗೆ ಪರಿಚಿತರಲ್ಲದ ಅಪ್ಪ ಮಗ ನನ್ನಂತೆಯೆ ನಸುಕಿನಲ್ಲಿ ಸುತ್ತಲು ಬರುತ್ತಿದ್ದರು. ನನಗೆ ತಿಳಿದವರೊಬ್ಬರು ನೋಡಿ ಸಾರ್ ಅಪ್ಪ ಮಗ ಇಬ್ಬರೂ ಒಂದೇ ಸಾರಿ ಬೆಳಿಗ್ಗೆ ಬರುತ್ತಾರೆ. ಆದರೆ ಮಗನಿಗೆ ಸ್ವಲ್ಪ ಮಂದ ಬುದ್ದಿ, ಆದರೆ ಅಪ್ಪ ಕೋಟ್ಯಾಧೀಶ್ವರ ಅಂದರು. ಸರಿ ಎಂದು ಸುಮ್ಮನಾದೆ. ಸ್ವಲ್ಪ ಸಮಯದ ನಂತರ ಮಗನ ಶೂಗಳನ್ನು ಗಮನಿಸಿದೆ. ಇನ್ನೇನು ಕಿತ್ತುಹೋಗುವ, ತುಂಬಾ ಹಳೆಯದಾದ ಹಾಗೆ ಕಾಣಿಸುತ್ತಿದ್ದವು. ಮನಸ್ಸಿನಲ್ಲಿ "ಕೋಟ್ಯಾಧಿಪತಿ ಆದರೇನು ಅಪ್ಪ ಮಗನಿಗೆ ಸರಿಯಾದ ಒಂದು ಜೊತೆ ಜೋಡು ಕೊಡಿಸಿಲ್ಲವಲ್ಲ ಅಂದುಕೊಂಡೆ." ಅಪ್ಪನ ಬಗ್ಗೆ ನನ್ನ ತಲೆಯಲ್ಲಿ ಕೊಳಕು ಭಾವನೆ ಬಂತು. ಅಷ್ಟರಲ್ಲಿ ಅವರ ಸ್ನೇಹಿತರೊಬ್ಬರು ನಿಮ್ಮ ಮಗನ ಶೂ ಹರಿದಿದೆ ಬೇರೆಯದು ಕೊಡಿಸಿಲ್ಲವೇಕೆ ಎಂದರು? ಇಲ್ಲ ಸಾರ್, ಆರ್ಡರ್ ಮಾಡಿ ಆರು ತಿಂಗಳಾಯಿತು. ಇನ್ನೂ ಬಂದಿಲ್ಲ ಎಂದರು. ನಾನು ಥಟ್ಟನೆ ಅವರೆಡೆಗೆ ತಿರುಗಿ ಕಿವಿಗೊಟ್ಟೆ. ಆಗ ಅವರು "ನನ್ನ ಮಗನ ಕಾಲಿನಲ್ಲಿ ಆರು ಬೆರಳುಗಳಿವೆ. ಸಾಮಾನ್ಯವಾದ ಅಂಗಡಿಗಳಲ್ಲಿ ಸಿಗುವ ಶೂಗಳು ಅವನಿಗೆ ಹೊಂದುವುದಿಲ್ಲ, ಅವನಿಗೆ ವಿಶೇಷವಾಗಿ ತಮಿಳುನಾಡಿನಿಂದ ನನ್ನ ಮಗನ ಕಾಲಿನ ಅಳತೆಗೆ ಶೂ ಆರ್ಡರ್ ಕೊಟ್ಟು ಮಾಡಿಸಬೇಕು" ಎಂದರು. ನಮಗೆ ಕಣ್ಣಿಗೆ ಕಾಣುವ ಮನಸ್ಸಿಗೆ ತೋಚುವ ಎಷ್ಟೋ ವಿಚಾರಗಳು ಸರಿ ಎಂದೇ ಭಾವಿಸಿ ನಾವು ತೀರ್ಮಾನಕ್ಕೆ ಬಂದು ಬಿಡುತ್ತೇವೆ ಹಲವೊಮ್ಮೆ... ನಮ್ಮ ಕಣ್ಣಿಗೆ ತೋಚದ ಮನಸ್ಸಿಗೆ ನಿಲುಕದ ನಮಗೆ ಅರ್ಥವಾಗದ ಹಲವು ಸನ್ನಿವೇಶಗಳು ನಮ್ಮ ಎದುರಿಗೆ ಪ್ರತಿಕ್ಷಣ ಘಟಿಸುತ್ತವೆ. ಸುಮ್ಮನೆ ನಮ್ಮ ತಲೆಗೆ ತೋಚುವುದೇ ಪರಮ ಜ್ಞಾನ ಎಂದು ತೀರ್ಮಾನಿಸಿ ನಾನೇ ಸರಿ ಎಂಬ ಭಾವನೆ ನಮ್ಮಲ್ಲಿ ಮಾಯವಾಗಬೇಕು ಎಂದು ಅನ್ನಿಸಿತು. ಇಂದಿನಿಂದ ನಾನು ಏನನ್ನೇ ನೋಡಿದರೂ, ಕೇಳಿದರೂ ತೀರ್ಮಾನಕ್ಕೆ ಬರುವ ಮೊದಲು ಯೋಚಿಸಿ ತೀರ್ಮಾನಿಸಬೇಕೆಂದಿದ್ದೇನೆ.
ಕೆಲಸದ ಅವಧಿಯಲ್ಲಿ, ಮನೆಯಲ್ಲಿ, ಸ್ನೇಹಿತರನ್ನು ತಪ್ಪು ತಿಳಿಯುವ ಮುನ್ನ ಒಮ್ಮೆ ಆಲೋಚಿಸಿ. ಯಾವುದೋ ವಿಶೇಷ ಸನ್ನಿವೇಶ, ಅನಿವಾರ್ಯತೆ ವ್ಯಕ್ತಿಗಳ ಕ್ರಿಯೆ, ಪ್ರತಿಕ್ರಿಯೆ ನಮಗೆ ತಪ್ಪಾಗಿ ಕಾಣಿಸುತ್ತದೆ ಅಂದುಕೊಂಡು ನನಗೆ ಅನ್ನಿಸಿದ್ದೇ ಸರಿ ಎಂಬ ಭಾವನೆ ಬೇಡ. ಕೇಳಿದ್ದು ಸುಳ್ಳಾಗಬಹುದು ನೋಡಿದ್ದು ಸುಳ್ಳಾಗಬಹುದು. ರಮೇಶ ಎಂ.ಎಚ್. ನಿರಾತಂಕ
0 Comments
Leave a Reply. |
Categories
All
RAMESHA NIRATANKA ಉಲ್ಲಾಳು ವಾರ್ಡಿನ ಸಮಸ್ತ ನಾಗರೀಕರನ್ನು ಒಂದೇ ವೇದಿಕೆಯಡಿಯಲ್ಲಿ ತರಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಸಮಾಜದ ವಿವಿಧ ಕ್ಷೇತ್ರದ 50,000 ಕ್ಕೂ ಹೆಚ್ಚು ಸದಸ್ಯರು ನಿರಾತಂಕ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಒಡನಾಟದಲ್ಲಿದ್ದಾರೆ. ಹಲವಾರು ಸಮಾಜ ಸೇವಾ ಕಾರ್ಯಗಳಲ್ಲಿ ನಿರಾತಂಕ ಸಂಸ್ಥೆಗೆ ಬೆಂಬಲವನ್ನು ನೀಡುತ್ತಿದ್ದಾರೆ. ತಾವೂ ಕೂಡ ನಮ್ಮೊಂದಿಗೆ ಕೈ ಜೋಡಿಸಲು ಮತ್ತು ಬೆಂಬಲಿಸಲು “8088433026” ನಂಬರ್ಗೆ “NIRATHANKA” ಎಂದು ಸಂದೇಶವನ್ನು ಕಳುಹಿಸಿಕೊಡಬಹುದು.
|