ಬದುಕಿನಲ್ಲಿ ಅನುಭವಗಳು ಪಾಠ ಕಲಿಸುತ್ತಾ ಸಾಗುತ್ತವೆ. ನಾವು ಪಾಠ ಕಲಿತಿದ್ದೇವೆ ಅನಿಸುತ್ತದೆ. ಆದರೆ ಮತ್ತೆ ಮತ್ತೆ ಎಡವಿ ಬೀಳುತ್ತಿರುತ್ತೇವೆ. ಸಾವಿನವರೆಗೂ ಪಾಠ ಕಲಿಯುತ್ತಿರಲೇಬೇಕು ಅನಿಸುತ್ತದೆ. ಕೆಲವೊಮ್ಮೆ ನಮ್ಮ ಜಾನಪದ ಕಥೆಗಳು, ಹಿರಿಯರ ಅನುಭವದ ಮಾತುಗಳು ನಾವು ಸರಿಯಾಗಿ ಅರ್ಥಮಾಡಿಕೊಂಡರೆ ಬದುಕಿನಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಹಕಾರಿಯಾಗುತ್ತದೆ. ನನ್ನ ಜೀವನದಲ್ಲಿ ನಾನು ಓದಿದ ಮೂರು ಕತೆಗಳು ಇಂದಿಗೂ ನನಗೆ ಕ್ಲಿಷ್ಟಕರ ಸಮಯದಲ್ಲಿ ಕೆಲವು ನಿರ್ಧಾರ ತೆಗೆದುಕೊಳ್ಳಲು ಸಹಕಾರಿಯಾಗಿವೆ. ನಾನು ಈ ಕತೆ ಓದಿ ಬಹಳ ವರ್ಷಗಳು ಕಳೆದಿವೆ. ಹಾಗಾಗಿ ಎಲ್ಲಿ ಓದಿದೆ ಎಂಬ ನೆನಪಿಲ್ಲ, ಆದರೆ ಇಂದಿಗೂ ನನ್ನನ್ನು ಕಾಡುವ ಕಥೆಗಳಾಗಿವೆ. ರಾಮಕೃಷ್ಣ ಪರಮಹಂಸರು ಈ ಕಥೆ ಹೇಳಿದರು ಎಂದು ನೆನಪು. ಒಂದು ಸುಂದರ ಕುಟುಂಬ, ತಂದೆ ತಾಯಿ ಹಾಗೂ ಅವರಿಗೆ ಸುಮಾರು 12 ವರ್ಷದ ಒಬ್ಬ ಮಗ. ಮನೆಯ ಮುಂದೆ ಒಂದು ಉದ್ಯಾನವನ, ಅಲ್ಲಿ ಮಗು ದಿನನಿತ್ಯ ಆಟವಾಡಲು ಹೋಗುತ್ತಿದ್ದನು. ಆ ಸಮಯಕ್ಕೆ ಅಲ್ಲಿಗೆ ಸುಮಾರು ಜಿಂಕೆಗಳು ಬಂದು ಮಗುವಿನ ಜೊತೆ ಕಾಲ ಕಳೆಯುತ್ತಿದ್ದವು. ಹೀಗೆ ಒಮ್ಮೆ ಮನೆಗೆ ಅತಿಥಿಗಳು ಬರುವುದು ನಿಶ್ಚಯವಾಯಿತು. ಆಗ ತಂದೆ-ತಾಯಿ ತಮ್ಮ ಮಗನಿಗೆ ಉದ್ಯಾನವನದಲ್ಲಿ ಆಡುವಾಗ ನಿನ್ನ ಬಳಿಗೆ ಬರುವ ಜಿಂಕೆಯನ್ನು ಮನೆಗೆ ಕರೆದುಕೊಂಡು ಬಾ ನಾವು ಅತಿಥಿಗಳಿಗೆ ಅದನ್ನು ಮಾಂಸಾಹಾರವಾಗಿ ಬಡಿಸೋಣ ಎಂದರಂತೆ. ಆದರೆ ಮಗ ಅದಕ್ಕೆ ಒಪ್ಪಲಿಲ್ಲ. ಆದರೆ ತಂದೆ-ತಾಯಿ ಒತ್ತಾಯಕ್ಕೆ ಕೊನೆಗೆ ಒಪ್ಪಿಕೊಂಡನಂತೆ. ಮರುದಿನ ತಂದೆ-ತಾಯಿಗಳ ಮಾತಿನಂತೆ ಒಂದು ಜಿಂಕೆಯನ್ನು ಕರೆದು ಮನೆಗೆ ತರೋಣ ಎಂದು ಹೋದನಂತೆ. ಆದರೆ ಎಂದಿನಂತೆ ಜಿಂಕೆಗಳು ಮಗುವಿನ ಬಳಿ ಬರದೆ, ದೂರದಲ್ಲೇ ನಿಂತಿದ್ದವಂತೆ. ಅಂದರೆ ಜಿಂಕೆಗಳಿಗೆ ಮಗುವಿನ ಮನಸ್ಸಿನಲ್ಲಿರುವ ಆಲೋಚನೆ ತಿಳಿಯಿತು, ಹತ್ತಿರ ಹೋದರೆ ನಮ್ಮನ್ನು ಅವನ ಮನೆಗೆ ಕರೆದೊಯ್ದು ಕೊಲ್ಲುತ್ತಾರೆ ಎಂದು. ಹಾಗಾಗಿ ಅವುಗಳು ಮಗುವಿನ ಹತ್ತಿರ ಸುಳಿಯಲಿಲ್ಲ ಎಂಬುದು ಈ ಕಥೆಯ ಸಾರಾಂಶ. ಈ ಮೇಲಿನ ಎಲ್ಲಾ ಕಥೆಗಳನ್ನು ಕೇಳಿದ ನಂತರ ನನ್ನ ಮೇಲೆ ಅಗಾಧವಾದ ಪರಿಣಾಮ ಬೀರಿದವು. ಸುನಾಮಿಯ ಸಂದರ್ಭದಲ್ಲಿ ನಾನು ಪತ್ರಿಕೆಗಳಲ್ಲಿ ಓದಿದ ನೆನಪು. ಸುನಾಮಿ ಬರುವ ಮುಂಚೆ ಹಲವಾರು ಜಲಚರಗಳು ತಮ್ಮ ತಮ್ಮ ಆವಾಸ ಸ್ಥಾನವನ್ನು ಬಿಟ್ಟು ಬಹುದೂರ ಸಾಗಿದ್ದವಂತೆ. ಅದೇ ರೀತಿ ಸುನಾಮಿಯ ಸುಳಿವನ್ನು ಅರಿತ ಪ್ರಾಣಿಗಳು ಸುನಾಮಿಯಿಂದ ಬಚಾವಾಗಿದ್ದವಂತೆ. ಕೇವಲ ಕಟ್ಟಿ ಹಾಕಿದ್ದ ಪ್ರಾಣಿಗಳು ಸತ್ತು ಬಿದ್ದವು ಎಂಬುದು ಸುದ್ದಿ. ಪ್ರಾಣಿ ಹಾಗೂ ಸಸ್ಯ ಸಂಕುಲಗಳಿಗೆ ಸೂಕ್ಷ್ಮ ಸಂವೇದನೆಗಳು ಅರ್ಥವಾಗುತ್ತವೆ. ಮನುಷ್ಯರಿಗೆ ಅರ್ಥವಾಗುವುದಿಲ್ಲವೇ? ಖಂಡಿತ ಎಲ್ಲರಿಗೂ ಎದುರಿಗೆ ಇರುವ ಇನ್ನೊಬ್ಬರ ಮನಸ್ಸಿನ ಭಾವನೆ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಇರುತ್ತದೆ. ಆದ್ದರಿಂದ ನಟನೆ ಮಾಡಬಾರದು ಎಂಬುದನ್ನು ಅರಿತೆ. ಆದರೆ ಇರುವುದನ್ನು ಇದ್ದಂತೆ ಹೇಳುತ್ತಾ ಸಾಗಿದರೆ ಬದುಕು ಸಾಗಿಸಲು ಕಷ್ಟಕರವಾಗುತ್ತದೆ. ಕೆಲವೊಮ್ಮೆ ಇದ್ದದ್ದನ್ನು ಇದ್ದ ಹಾಗೆ ಹೇಳಲು ಹೋಗಿ ಸಂಕಟ ತಂದುಕೊಂಡದ್ದೂ ಉಂಟು. ಇದ್ದದ್ದನ್ನು ಇದ್ದ ಹಾಗೆ ಹೇಳಿದರೆ ಹಲವು ಬಾರಿ ಸಂಕಟ ಕಟ್ಟಿಟ್ಟ ಬುತ್ತಿ. ಉದಾಹರಣೆಗೆ ಗೆಳೆಯನೊಬ್ಬ ಸಾಲ ಕೇಳಿದರೆ ನನ್ನ ಬಳಿ ಹಣ ಇದೆ, ಆದರೆ ನನಗೆ ಕೊಡುವಷ್ಟು ನಂಬಿಕೆ ನಿನ್ನ ಮೇಲೆ ಇಲ್ಲ ಎಂದು ಹೇಳುವುದಕ್ಕೆ ಸಾಧ್ಯವೇ? ಹಾಗಂತ ನಾವು ಇರುವುದನ್ನು ಇದ್ದಂತೆ ಹೇಳದಿದ್ದರೆ ನನ್ನ ಮನಸ್ಸಿನ ಭಾವನೆ, ನಟನೆ ಎದುರಿಗಿರುವವನಿಗೆ ಎಂದಾದರೂ ಗೊತ್ತಾಗುತ್ತದೆ ಎಂದು ಕೊರಗುವುದಲ್ಲ. ಪ್ರಬುದ್ಧವಾಗಿ ನಮ್ಮ ಆಲೋಚನೆ, ಮಾತು, ನಡೆ ನುಡಿ ಎಲ್ಲವೂ ಇರಬೇಕಾಗುತ್ತದೆ.
ಒಮ್ಮೆ ನಾಲ್ಕೈದು ಕಳ್ಳರ ಗುಂಪೊಂದು ಒಬ್ಬನನ್ನು ಅಟ್ಟಿಸಿಕೊಂಡು ಬರುತ್ತಾರೆ. ಆಗ ಕಳ್ಳರಿಂದ ತಪ್ಪಿಸಿಕೊಳ್ಳಲು ವ್ಯಕ್ತಿ ಸಂದಿಯಲ್ಲಿ ಬಚ್ಚಿಟ್ಟುಕೊಳ್ಳುತ್ತಾನೆ. ಅದನ್ನು ಅಲ್ಲಿಯೇ ಜಪಿಸುತ್ತಿದ್ದ ಒಬ್ಬ ಋಷಿ ನೋಡುತ್ತಾನೆ. ಕಳ್ಳರ ಗುಂಪಿನವರು ಬಂದು ಋಷಿಯನ್ನು ಈ ದಾರಿಯಲ್ಲಿ ಒಬ್ಬ ಬಂದನು ನೋಡಿದಿರಾ ಎಂದು ಕೇಳುತ್ತಾರೆ. ಆದರೆ ಋಷಿ ಪರಿಸ್ಥಿತಿಯನ್ನು ಅರಿತು ನೋಡಲಿಲ್ಲ ಎನ್ನುತ್ತಾರೆ. ಋಷಿಯಾಗಿ ನಾನು ಸತ್ಯವನ್ನೇ ಹೇಳಬೇಕು ಎಂದು ಹೇಳಿದ್ದರೆ ಕಳ್ಳರಿಗೆ ಸಹಕರಿಸಿದಂತಾಗುತ್ತಿತ್ತು. ಹಾಗಾಗಿ ಪರಿಸ್ಥಿತಿ, ನ್ಯಾಯ, ಧರ್ಮವನ್ನು ಅರಿತು ನಾವು ನಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳುವ ಅವಶ್ಯಕತೆ ಇರುತ್ತದೆ ಅನಿಸುತ್ತದೆ. ಈ ಮೇಲ್ಕಂಡ ಲೇಖನದ ಕುರಿತಾಗಿ ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಕೆಳಗಿನ Comment Box ನಲ್ಲಿ ತಿಳಿಸಿ ಹಾಗೂ ನಿಮ್ಮ ಇದೇ ರೀತಿಯಾದಂತಹ ಅನುಭವಗಳಾಗಿದ್ದಲ್ಲಿ ಅವುಗಳನ್ನು ಬರೆದು ಕಳುಹಿಸಿಕೊಡಿ. ನಮ್ಮ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವುದು. ಇಲ್ಲಿ ಪ್ರಕಟಿಸುವುದರಿಂದ ಸಾವಿರಾರು ಜನಕ್ಕೆ ಈ ಲೇಖನವು Whatsapp ಹಾಗೂ ಅಂತರ್ಜಾಲ ತಾಣದಲ್ಲಿ ತಲುಪಿ ಹಲವರಿಗೆ ಉಪಯುಕ್ತವಾಗಬಹುದು. ರಮೇಶ ಎಂ.ಎಚ್. ನಿರಾತಂಕ
0 Comments
Leave a Reply. |
Categories
All
RAMESHA NIRATANKA ಉಲ್ಲಾಳು ವಾರ್ಡಿನ ಸಮಸ್ತ ನಾಗರೀಕರನ್ನು ಒಂದೇ ವೇದಿಕೆಯಡಿಯಲ್ಲಿ ತರಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಸಮಾಜದ ವಿವಿಧ ಕ್ಷೇತ್ರದ 50,000 ಕ್ಕೂ ಹೆಚ್ಚು ಸದಸ್ಯರು ನಿರಾತಂಕ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಒಡನಾಟದಲ್ಲಿದ್ದಾರೆ. ಹಲವಾರು ಸಮಾಜ ಸೇವಾ ಕಾರ್ಯಗಳಲ್ಲಿ ನಿರಾತಂಕ ಸಂಸ್ಥೆಗೆ ಬೆಂಬಲವನ್ನು ನೀಡುತ್ತಿದ್ದಾರೆ. ತಾವೂ ಕೂಡ ನಮ್ಮೊಂದಿಗೆ ಕೈ ಜೋಡಿಸಲು ಮತ್ತು ಬೆಂಬಲಿಸಲು “8088433026” ನಂಬರ್ಗೆ “NIRATHANKA” ಎಂದು ಸಂದೇಶವನ್ನು ಕಳುಹಿಸಿಕೊಡಬಹುದು.
|