ಒಂದು ಪುಸ್ತಕ ನಮ್ಮ ಚಿಂತನೆಯ ವಿಧಾನವನ್ನು ಬದಲಿಸಿಬಿಡಬಲ್ಲದು. ಅದೇ ಒಂದು ಪುಸ್ತಕವೇಕೆ, ಒಂದು ಪುಸ್ತಕದೊಳಗಿನ ವಾಕ್ಯದಿಂದಲೂ ನಮ್ಮ ಜೀವನ ಬದಲಾಯಿಸಿಕೊಂಡುಬಿಡಬಹುದು. ಆದರೆ ನಮಗೆ ಬದಲಾಯಿಸಿಕೊಳ್ಳುವ ತಾಕತ್ತು ಇರಬೇಕು ಅಷ್ಟೆ. ಒಂದು ದೀಪ ಸುತ್ತಲೂ 4 ಅಡಿ ಬೆಳಕು ನೀಡುತ್ತದೆ. ಅದೇ ದೀಪವನ್ನು ಹಿಡಿದು ಕತ್ತಲಲ್ಲಿ ನಡೆಯುತ್ತಾ ಸಾಗಿದರೆ ದಾರಿಯುದ್ದಕ್ಕೂ ಬೆಳಕು ನೀಡಬಲ್ಲದು. ನಾವು ತಲುಪಬೇಕಾಗಿರುವ ಜಾಗವನ್ನು ದೀಪದ ಬೆಳಕಿನಿಂದ ತಲುಪಿಬಿಡಬಹುದು. ಅಂತೆಯೇ ಒಂದು ಪುಸ್ತಕದಲ್ಲಿನ ವಿಚಾರಗಳು ಹಲವು ವಿಭಿನ್ನ ವಿಚಾರ, ಚಿಂತನೆ, ಪ್ರಶ್ನೆಗಳನ್ನು ನಮ್ಮ ತಲೆಯೊಳಗೆ ಬಿತ್ತುತ್ತವೆ ಎಂದರೆ ತಪ್ಪಾಗಲಾರದು. ಇದರಿಂದಾಗಿ ಮತ್ತೆ ಹಲವು ಪುಸ್ತಕಗಳನ್ನು ಓದಲೇಬೇಕಾದ ಅನಿವಾರ್ಯತೆ ಒದಗಿಬಂದು ಬಿಡುತ್ತದೆ. ನಾನು ನ್ಯಾಷನಲ್ ಕಾಲೇಜಿನಲ್ಲಿದ್ದಾಗ ಎಚ್.ಎನ್. ಆಡಿಟೋರಿಯಂ ನಲ್ಲಿ “ಪ್ರಶ್ನಿಸದೇ ಒಪ್ಪಿಕೊಳ್ಳಬೇಡಿ” ಎಂಬ ಒಂದು ವಾಕ್ಯವನ್ನು ಎಚ್. ನರಸಿಂಹಯ್ಯ ರವರು ಹೇಳಿ ಬರೆಸಿದ್ದರು. ಆ ಒಂದು ವಾಕ್ಯದ ಪ್ರಭಾವದಿಂದ ಅವರ ಆತ್ಮಕಥೆಯಾದ ಹೋರಾಟದ ಹಾದಿ ಪುಸ್ತಕವನ್ನು ಓದಿ ಮುಗಿಸುವಷ್ಟರಲ್ಲಿ ಎಚ್.ಎನ್. ರವರ ವೈಜ್ಞಾನಿಕ ಆಲೋಚನೆಗಳು ತಲೆಯೊಳಗೆ ಒಕ್ಕಿದ್ದವು. ಎಚ್.ಎನ್. ರವರು ಪುಟ್ಟಪರ್ತಿ ಸಾಯಿಬಾಬಾ ರವರ ಹಲವಾರು ಪವಾಡಗಳನ್ನು ಎಚ್.ಎನ್. ಪ್ರಶ್ನಿಸಿದ್ದರು. ಬಾಬಾ ಜಾದೂ ಮಾಡಿ ಹಲವರಿಗೆ ಉಂಗುರ, ಬೂದಿಯನ್ನು ನೀಡುತ್ತಿದ್ದುದನ್ನು ಪ್ರಶ್ನಿಸಿ ಎಚ್. ನರಸಿಂಹಯ್ಯ ರವರು ಪುಟ್ಟಪರ್ತಿ ಸಾಯಿಬಾಬಾ ರವರ ಬಳಿಗೆ ಹೋಗಿ ನನಗೆ ಉಂಗುರ, ಬೂದಿ ಏನೂ ಬೇಡ. ಸಾಧ್ಯವಾದರೆ ಒಂದು ಬೂದುಗುಂಬಳಕಾಯಿ ಕೊಡುವಂತೆ ಕೇಳಿಕೊಂಡಿದ್ದರು. ಪುಟ್ಟಪರ್ತಿ ಸಾಯಿಬಾಬಾ ರವರಿಗೆ ಬೂದುಗುಂಬಳಕಾಯಿ ಕೊಡುವುದು ಅಸಾಧ್ಯವಾದ್ದರಿಂದ ಅವರು ಮಾಡುವುದು ಪವಾಡವಲ್ಲ, ಅದೊಂದು ಅವೈಜ್ಞಾನಿಕ ನಂಬಿಕೆ ಎಂದು ತಿಳಿದು ಬಂತು. ಎಚ್.ಎನ್. ರವರ ಬದುಕು ಸರಳ ಜೀವನ, ಅವರು ಮಲಗುತ್ತಿದ್ದ ಜಾಗ, ಅವರ ರೂಂ ನಲ್ಲಿದ್ದ ಕೆಲವೇ ಕೆಲವು ವಸ್ತುಗಳು ಎಲ್ಲವೂ ಸರಳವಾಗಿ ಬದುಕುವಂತೆ ಪ್ರೇರೇಪಿಸಿದವು. ಒಂದು ವಾಕ್ಯದಿಂದ ಪ್ರಭಾವಿತವಾಗಿ ಎಚ್.ಎನ್. ರವರ ಪುಸ್ತಕವನ್ನು ಓದಿ, ಅವರ ಬದುಕನ್ನು, ಅವರ ತತ್ವಗಳನ್ನು ಅನುಸರಿಸುವಂತೆ ಮಾಡಿದ್ದು, ಒಂದು ಪುಸ್ತಕಕ್ಕೆ ಇರುವ ಶಕ್ತಿಯನ್ನು, ತಾಕತ್ತನ್ನು ತೋರಿಸುತ್ತದೆ.
ನಂತರದ ದಿನಗಳಲ್ಲಿ ಕನ್ನಡದ ಸಾಹಿತ್ಯ ವಿದ್ಯಾರ್ಥಿಗಳಾಗಿ ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸ ಬೆಳೆಯತೊಡಗಿತು. ಕಾಲೇಜಿನ ದಿನಗಳಲ್ಲಿ ಕುವೆಂಪು, ತೇಜಸ್ವಿ, ಬೇಂದ್ರೆ, ಪಿ. ಲಂಕೇಶ್ ಇವರ ಕೆಲವು ಕೃತಿಗಳು ಆವರಿಸಿಕೊಂಡಿದ್ದವು. ಆಗ ತಾನೇ ಪಿ. ಲಂಕೇಶ್ ರವರ ಹುಳಿಮಾವಿನ ಮರ ಪುಸ್ತಕವನ್ನು ಓದಿದ ನನಗೆ ಹೊಸ ಪ್ರಪಂಚದ ಅನಾವರಣವಾದಂತಾಯಿತು. ಸಾಹಿತ್ಯ ಒಂದು ಕಡೆಯಾದರೆ ನ್ಯಾಷನಲ್ ಕಾಲೇಜಿನಲ್ಲಿ ನಾಟಕಗಳ ತಂಡವನ್ನು ಕಟ್ಟಿಕೊಂಡು ಅಂತರ್ ಕಾಲೇಜು ನಾಟಕ ಸ್ಪರ್ಧೆಯಲ್ಲಿ ಭಾಗವಹಿಸುವುದು ಹವ್ಯಾಸವಾಗಿತ್ತು. ನಾಟಕ ತಂಡದೊಂದಿಗೆ ಹೆಜ್ಜೆ ಹಾಕತೊಡಗಿದಾಗ ಸಾಹಿತ್ಯವನ್ನು ಅಲ್ಪಸ್ವಲ್ಪ ಮಟ್ಟಿಗೆ ಅರ್ಥ ಮಾಡಿಕೊಳ್ಳಲು ಸಹಕಾರಿಯಾಯಿತು. ಸಾಹಿತ್ಯ ಹಾಗೂ ನಾಟಕ ಪುಸ್ತಕಗಳು ಬದುಕಿದ ದಾರಿಯನ್ನು ನಾವು ಪ್ರಪಂಚವನ್ನು ನೋಡಿರುವ ದೃಷ್ಟಿಕೋನವನ್ನು ಬದಲಿಸಿಬಿಡುತ್ತದೆ. ಕಾಲೇಜು ದಿನಗಳು ಮುಗಿದ ನಂತರ ನನ್ನ ಸ್ನೇಹಿತ ಕಪಿಲ್ “ಓಶೊ” ಪುಸ್ತಕಗಳನ್ನು ಓದಲು ಹೇಳಿದ. ಓಶೋ ವಿನ ಸುಮಾರು 50 ಪುಸ್ತಕಗಳನ್ನು ಓದಿ ಮುಗಿಸುವಷ್ಟರಲ್ಲಿ ಕೆಲವು ವಿಭಿನ್ನ ಆಲೋಚನೆಗಳು ಹಾಗೂ ನಾನು ಪ್ರಪಂಚವನ್ನು ನೋಡುವ ದೃಷ್ಟಿಕೋನ ಬದಲಾಗಿಬಿಟ್ಟಿದ್ದವು. ಇದಾದ ನಂತರ ಹಲವು ಸಾಹಿತ್ಯ ಕೃತಿ ಓದುವುದು ಹವ್ಯಾಸವಾಗತೊಡಗಿತು. ಪ್ರಸ್ತುತ ಈಗ ಬುದ್ಧನ ವಿಚಾರಧಾರೆ ಓದಲು ಪ್ರಾರಂಭಿಸಿ ಈಗಲೂ ಸಮಯ ಸಿಕ್ಕಾಗಲೆಲ್ಲಾ ಓದುವುದರಲ್ಲೇ ತಲ್ಲೀನನಾಗಿರುತ್ತೇನೆ. ಓದು ಸಾಹಿತ್ಯ ಮಾತ್ರ ನಮ್ಮ ಜೀವನವನ್ನು ರೂಪಿಸಬಲ್ಲದು ಹಾಗೂ ನಮ್ಮನ್ನು ಪರಿಪೂರ್ಣತೆಯೆಡೆಗೆ ಕರೆದುಕೊಂಡು ಹೋಗಬಲ್ಲದು. ಓದಿನಿಂದ ಮಾತ್ರ One of the best lessons you can learn in life is to master how to remain calm ಎಂಬ ಸತ್ಯವನ್ನು ಅರ್ಥ ಮಾಡಿಕೊಳ್ಳಬಹುದು. ವಂದನೆಗಳೊಂದಿಗೆ ರಮೇಶ ಎಂ.ಎಚ್. www.socialworkfootprints.org
0 Comments
Leave a Reply. |
Categories
All
RAMESHA NIRATANKA ಉಲ್ಲಾಳು ವಾರ್ಡಿನ ಸಮಸ್ತ ನಾಗರೀಕರನ್ನು ಒಂದೇ ವೇದಿಕೆಯಡಿಯಲ್ಲಿ ತರಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಸಮಾಜದ ವಿವಿಧ ಕ್ಷೇತ್ರದ 50,000 ಕ್ಕೂ ಹೆಚ್ಚು ಸದಸ್ಯರು ನಿರಾತಂಕ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಒಡನಾಟದಲ್ಲಿದ್ದಾರೆ. ಹಲವಾರು ಸಮಾಜ ಸೇವಾ ಕಾರ್ಯಗಳಲ್ಲಿ ನಿರಾತಂಕ ಸಂಸ್ಥೆಗೆ ಬೆಂಬಲವನ್ನು ನೀಡುತ್ತಿದ್ದಾರೆ. ತಾವೂ ಕೂಡ ನಮ್ಮೊಂದಿಗೆ ಕೈ ಜೋಡಿಸಲು ಮತ್ತು ಬೆಂಬಲಿಸಲು “8088433026” ನಂಬರ್ಗೆ “NIRATHANKA” ಎಂದು ಸಂದೇಶವನ್ನು ಕಳುಹಿಸಿಕೊಡಬಹುದು.
|