ಸಮಾಜಕಾರ್ಯ ಅಧ್ಯಾಪನದಿಂದ ನಿವೃತ್ತಿ ಹೊಂದಿಯೇ ಹದಿನಾರು ವರ್ಷಗಳು ಉರುಳಿದವು. ನನ್ನ ಜೀವನವನ್ನು ಸಿಂಹಾವಲೋಕನ ಮಾಡಿದರೆ ಕಾಣುವುದೇನು? ಸಮಾಜಕಾರ್ಯದ ಮತ್ತು ನನ್ನ ಜೀವನಾನುಭವದ ಹೆಜ್ಜೆಗುರುತುಗಳೇನು? ಈ ಪ್ರಶ್ನೆಗಳ ಸುತ್ತಲೇ ತಿರುಗುತ್ತಿರುವ ಸ್ಥೂಲಾವಲೋಕನ ಈ ಮುಂದಿನದ್ದು. ಪ್ರವೇಶ ಆಕಸ್ಮಿಕ ಸಮಾಜಕಾರ್ಯಕ್ಕೆ ನಾನು ಪ್ರವೇಶಿಸಿದ್ದು ಆಶ್ಚರ್ಯಕರ ರೀತಿಯಲ್ಲಿ, ಬಹುಶಃ ನನ್ನ ಅರಿವಿಲ್ಲದಂತೆಯೇ' ಗುರುತಿಸಬಹುದಾದರೆ ಸದಾಶಯ ಹೊಂದಿದ್ದ ಹಿರಿಯರೊಬ್ಬರ ಸಲಹೆ ಸೂಚನೆಯ ಮೇರೆಗೆ, ಕನ್ನಡ ಸಾಹಿತ್ಯದ ಆರಾಧಕ ಅಥವಾ ಕೃಷಿಕ ಆಗಬೇಕು ಎಂಬುದು ನನ್ನ ಅಪೇಕ್ಷೆಯಾಗಿತ್ತು. ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗಲೇ ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡು, ಕವನ ಪ್ರಬಂಧ ರಚನೆಯಲ್ಲಿ ತೊಡಗಿದ್ದು, ಕನ್ನಡ ಸಾಹಿತ್ಯ ಕೃತಿಗಳನ್ನೇ ಓದುವುದರಲ್ಲಿ ಹೆಚ್ಚಿನ ಆಸಕ್ತಿ, ಆಸ್ಥೆಯನ್ನು ತಳೆದಿದ್ದೆ. ಅಂದಿನ ಮದ್ರಾಸು ಪ್ರಾಂತ್ಯಕ್ಕೆ ಎಸ್.ಎಸ್.ಎಲ್.ಸಿ., ಪರೀಕ್ಷೆಯಲ್ಲಿ ಕನ್ನಡದಲ್ಲಿ ಪ್ರಥಮ ಸ್ಥಾನ ಪಡೆದಿದ್ದೆ. ನನ್ನ ಗುರುಗಳೂ ನನಗೆ ಪ್ರೋತ್ಸಾಹದ ನೆರವು ನೀಡುತ್ತಿದ್ದರು. ಇದೂ ನನ್ನ ಕನ್ನಡ ದುಡಿಮೆಗೆ ಒತ್ತಾಸೆಯಾಯ್ತು. (ಆರ್ಥಿಕ ಅನನುಕೂಲ ಮತ್ತು ಇತರ ತೊಂದರೆಗಳ ಕಾರಣದಿಂದ ಒಂದು ವರ್ಷ ನನ್ನ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗದಿದ್ದುದರಿಂದ ಪತ್ರಿಕೋದ್ಯಮಿಯಾಗಿ ಹುಬ್ಬಳ್ಳಿ, ದಾವಣಗೆರೆ ನಗರಗಳಲ್ಲಿ ಕೆಲಸ ಮಾಡಬೇಕಾಯ್ತು) ಪ್ರೌಢಶಾಲಾ ಶಿಕ್ಷಣದ ನಂತರ ನನ್ನ ಅಣ್ಣ ಹಿ.ಮ. ನಾಗಯ್ಯನವರ ಸಹಾಯದಿಂದ ಮೈಸೂರಿನ ಸೇಂಟ್ ಫಿಲೋಮಿನಾ ಕಾಲೇಜಿನಲ್ಲಿ ಇಂಟರ್ ಮೀಡಿಯಟ್ ಸೇರಿದೆ. ಅಲ್ಲಿ ಓದುವಾಗ ಪ್ರೊ. ಕೆ.ಎಸ್. ಕೃಷ್ಣಮೂರ್ತಿ, ಪ್ರೊ. ಗೋಪಾಲಕೃಷ್ಣ ಅಡಿಗ, ಇಂಗ್ಲೆಂಡಿನ ಡೇವಿಡ್ ಹಾರ್ಸ್ ಬರೋ ಇಂಥವರ ನೆರವು ದೊರೆಯಿತು. ಅಲ್ಲಿಯೇ ಕರುಣಾಮಯಿ ಫಾದರ್ ಮುತಡಂ ಕಷ್ಟಕಾಲದಲ್ಲಿ ನೆರವಾದರು. ಆ ಅಧ್ಯಯನ ಕಾಲದಲ್ಲಿಯೇ ಕನ್ನಡದ ಕೃಷಿ ನಡೆದು ಅಂತಿಮ ಪರೀಕ್ಷೆಯಲ್ಲಿ ಒಂಭತ್ತನೆಯ ರ್ಯಾಂಕ್ ಪಡೆದುದಲ್ಲದೆ ಮೈಸೂರು ವಿಶ್ವವಿದ್ಯಾಲಯಕ್ಕೆ ಕನ್ನಡದಲ್ಲಿ ಪ್ರಥಮ ಸ್ಥಾನ ದೊರೆಕಿಸಿಕೊಂಡೆ ಎಂದು ನೆನಪು. ಆದುದರಿಂದಲೂ ಮಹಾರಾಜ ಕಾಲೇಜಿನಲ್ಲಿ ಕನ್ನಡ ಆನರ್ಸ್ ಓದಲು ನನಗೆ ಸಹಜವಾಗಿಯೇ ಅವಕಾಶ ಸಿಕ್ಕಿದುದಲ್ಲದೆ ಮೆರಿಟ್ ಸ್ಕಾಲರ್‌ಷಿಪ್ ಕೂಡಾ ದೊರೆಯಿತು. ಪಡೆದ ತಿರುವು
ಅದೇ ಆ ಸಂದರ್ಭದಲ್ಲಿಯೇ ನನ್ನ ಶೈಕ್ಷಣಿಕ ಜೀವನಕ್ಕೆ ತಿರುವು ಸಿಕ್ಕಿತು, ಮತ್ತು ಗೊತ್ತಾಗದ ರೀತಿಯಲ್ಲಿ ನನ್ನ ವೃತ್ತಿ ಜೀವನದ ಅಂಕುರಾರ್ಪಣವಾಯ್ತು. (1952-53). ಆಗ ಮೈಸೂರು ವಿಶ್ವವಿದ್ಯಾಲಯದ ಕುಲಪತಿಯವರಾಗಿದ್ದ ಡಾ. ಬಿ.ಎಲ್. ಮಂಜುನಾಥ ಅವರ ಸಲಹೆ ಪ್ರಕಾರ ನಾನು ಕನ್ನಡ ಆನರ್ಸ್ ಬಿಟ್ಟು ಸಮಾಜಶಾಸ್ತ್ರ ಆನರ್ಸ್ ಸೇರಿದೆ. ಅದೇ ವರ್ಷವೇ `ಸಾಮಾಜಿಕ ತತ್ವಶಾಸ್ತ್ರ ತನ್ನ ನಾಮವನ್ನು `ಸಮಾಜಶಾಸ್ತ್ರ' ಆಗಿ ಪರಿವರ್ತಿಸಿಕೊಂಡಿತ್ತು. `ಮೆಟಫಿಸಿಕ್ಸ್’ ಇದ್ದದ್ದು `ಫಿಲಾಸಫಿ’ ಆಯ್ತು. (ಆ ಕೋರ್ಸ್ಗೆ ಎಸ್.ಎಲ್. ಭೈರಪ್ಪ ಸೇರಿದ್ದ ನೆನಪು. ಇಂಗ್ಲಿಷ್ ಆನರ್ಸ್ನಲ್ಲಿ ಯು.ಆರ್. ಅನಂತಮೂರ್ತಿ, ಕನ್ನಡ ಆನರ್ಸ್ನಲ್ಲಿ ಆಗಲೇ ಎಂ. ಚಿದಾನಂದಮೂರ್ತಿ ಅಧ್ಯಯನ ಮಾಡುತ್ತಿದ್ದರು.) ಬಹುದೊಡ್ಡ ವಿದ್ವಾಂಸರ ಗುಂಪೇ ಆ ಕಾಲೇಜಿನಲ್ಲಿ ನಮ್ಮ ಅಧ್ಯಯನಕ್ಕೆ ಚೇತನ ತುಂಬಿದರು. ಸಮಾಜಶಾಸ್ತ್ರಕ್ಕೆ ಸಂಬಂಧಿಸಿದಂತೆ ಎಂ. ಯಾಮುನಾಚಾರ್ಯ, ಟಿ.ಎ. ಪುರಷೋತ್ತಮ, ಎನ್.ಎ. ನಿಕ್ಕಂ, ಮುಂತಾದವರಿದ್ದರೆಂದು ನೆನೆಸಿಕೊಂಡರೆ ರೋಮಾಂಚನವಾಗುತ್ತದೆ. ಸಮಾಜಶಾಸ್ತ್ರದ ಅಧ್ಯಯನದ ಮಧ್ಯೆಯೂ ಸೃಜನಾತ್ಮಕ ಸಾಹಿತ್ಯವು ನನ್ನ ಒಳಗನ್ನು ತುಂಬಿಕೊಂಡೇ ಇತ್ತು. ಸಮಾಜದ ಸಂಕೀರ್ಣದ ಮತ್ತು ವ್ಯಕ್ತಿತ್ವದ ಒಳಪದರುಗಳ ಪರಿಚಯವಾಗುತ್ತಿದ್ದಂತೆ ನನ್ನ ಸೃಜನಾತ್ಮಕ ಶಕ್ತಿಗೆ ನವಿನ ಆಯಾಮಗಳು ಸೇರಿಕೊಂಡವು. ಇವುಗಳಿಂದ ಸಾಹಿತ್ಯ ವಲಯದಲ್ಲಿ ಕೆಲವು ಕಾರ್ಯಕ್ರಮಗಳಿಗೆ ಪ್ರವರ್ತಕನು ನಾನಾದೆನೆಂಬುದು ನೆನಪಾಗುತ್ತಿದೆ. `ಕನ್ನಡ ಕುಲ’ಪ್ರಕಾಶನ ಸಂಸ್ಥೆಯೊಂದನ್ನು ಆರಂಭಿಸಿ, ಸಹಪಾಠಿಗಳನ್ನು ಸಂಘಟಿಸಿದೆ. ಸಾಹಿತ್ಯ ಸಂಘವನ್ನು ಆರಂಭಿಸಿ, ಗೆಳೆಯರೊಡಗೂಡಿ ಮಾಸಿಕ ಸಂವಾದಗೋಷ್ಠಿಗಳನ್ನು ನಡೆಸುತ್ತಾ ಅಂದು ಸುಪ್ರಸಿದ್ಧರಾಗಿದ್ದ ಎಂ. ಗೋಪಾಲಕೃಷ್ಣ ಅಡಿಗ, ಆನಂದ, ತರಾಸು, ತ್ರಿವೇಣಿ, ಮುಂತಾದವರನ್ನು ಕೂಡಿಸುವ ಪ್ರಯತ್ನ ಮಾಡಿದೆ. ಇಂಟರ್‌ಮೀಡಿಯೆಟ್ ಓದುವಾಗಲೇ ಮೊಳಕೆದೋರಿದ ವಸ್ತುವನ್ನು ಆಧರಿಸಿ, ಮನೋವಿಶ್ಲೇಷಣಾತ್ಮಕ ಕಾದಂಬರಿ `ಕೆದರಿದ ಕೆಂಡ’ವನ್ನು ಬರೆದು ಪ್ರಕಟಿಸಿದೆ. (ಈ ಪ್ರಕಟಣೆಗೆ ನೆರವಾದವರು ಸಾಹಿತಿ ಹೆಚ್. ದೇವಿರಪ್ಪ, ಪ್ರಕಾಶಕರು: ಹರಿಹರದ ವಿದ್ಯಾರಣ್ಯ ಪ್ರಕಾಶನ 1954) ಈ ಕಾದಂಬರಿಯು ಪ್ರಶಂಸೆಯನ್ನು ಗಳಿಸಿ, ಹಿರಿಯ ಸಾಹಿತಿಗಳ ಗಮನ ಸೆಳೆಯಿತು. ಸಮಾಜಶಾಸ್ತçದ ಮೂಲಕ ಇತರ ಸಮಾಜವಿಜ್ಞಾನಗಳ ಪರಿಚಯವಾಗತೊಡಗಿ ಕನ್ನಡ ಸಾಹಿತ್ಯದಾಚೆಗಿನ ವಾಸ್ತವತೆಯ ವಿಸ್ತಾರ ಜಗತ್ತು ಕಣ್ಮುಂದೆ ತೆರೆದುಕೊಂಡಿತು. ಅಂತರ್ಮುಖತೆಯೇ ನನ್ನ ವ್ಯಕ್ತಿತ್ವದ ಪ್ರಧಾನ ಲಕ್ಷಣವಾಗಿದ್ದುದು ಬಹಿರ್ಮುಖತೆಗೆ ಮೊಗ ಮಾಡತೊಡಗಿತು. ಸಮಾಜಕಾರ್ಯದ ಅಂಕುರಾರ್ಪಣೆ ಆನರ್ಸ್ ಮುಗಿದ ಮೇಲೆ (ಪ್ರಥಮ ದರ್ಜೆಯಲ್ಲಲ್ಲದಿದ್ದರೂ, ಎರಡನೆಯ ದರ್ಜೆಯಲ್ಲಿಯೇ ಹೆಚ್ಚಿನ ಅಂಕಗಳನ್ನು ಗಳಿಸಲು ಸಾಧ್ಯವಾಯಿತು.), ಸ್ನಾತಕೋತ್ತರ ಪದವಿಯನ್ನು ಪಡೆದೆ (ಇದೂ ಎರಡನೆಯ ದರ್ಜೆಯದೇ-1956) ಆನರ್ಸ್ ಆದ ಮೇಲೆ ಕಾಲೇಜಿನಲ್ಲಿ ತರ್ಕಶಾಸ್ತ್ರದ ಉಪನ್ಯಾಸಕ ಹುದ್ದೆಯನ್ನು ಮೈಸೂರು ವಿಶ್ವವಿದ್ಯಾಲಯ ನೀಡಿತು. ನನ್ನ ಆರ್ಥಿಕ ಸ್ಥಿತಿಯ ಹಿನ್ನೆಲೆಯಲ್ಲಿ ಅದನ್ನು ಒಪ್ಪಿಕೊಂಡು ಕೆಲಸ ತೊಡಗಬೇಕೆಂಬ ಮನಸ್ಸಿದ್ದರೂ, ಮತ್ತೆ ಅದೇ ಡಾ. ಮಂಜುನಾಥ ಅವರು ಮುಂದೆ ಓದಲು ಸಲಹೆ ಮಾಡಿದರು. ಕಾಲೇಜು ಶಿಕ್ಷಣದ ಆರಂಭದಿಂದಲೂ ಸುತ್ತೂರು ವಿದ್ಯಾರ್ಥಿನಿಲಯದಲ್ಲಿ ಪ್ರಸಾದ ವ್ಯವಸ್ಥೆ ಇದ್ದುದರಿಂದಲೂ, ಸರ್ಕಾರದ ಶಿಷ್ಯ ವೇತನ ದೊರೆಯುತಲಿದ್ದುದ್ದರಿಂದಲೂ ನನ್ನ ಶಿಕ್ಷಣವನ್ನು ಮುಂದುವರೆಸಲು ನಿರ್ಧರಿಸಿ, ಸಮಾಜಶಾಸ್ತçದ ಎಂ.ಎ. ಮುಗಿಸಿದೆ (1956) ಇದಾದ ನಂತರ ಮುಂದೇನು? (ಕನ್ನಡವನ್ನು ಬಿಟ್ಟು ಸಮಾಜಶಾಸ್ತ್ರ ಸೇರಿದಾಗ ಡಾ. ಜಿ.ಎಸ್. ಶಿವರುದ್ರಪ್ಪನವರು `ಮರುಳಸಿದ್ಧ' ಆಕಳ ಕೆಚ್ಚಲನ್ನು ಬಿಟ್ಟು ಅದರ ಕೊಂಬನ್ನು ಹಿಡಿದಂತಾಯ್ತು ಎಂಬ ಮಾತನಾಡಿದ್ದರು. ಈ ಮಾತು ನನಗೆ ಆಗಾಗ ನೆನಪಿಗೆ ಬರುತ್ತಿತ್ತು. ಸಮಾಜವನ್ನು ಸರಿಯಾದ ರೀತಿಯಲ್ಲಿ ಅರ್ಥೈಸಿಕೊಂಡು ಅದರ ಜ್ಞಾನದ ಪ್ರಭುತ್ವವನ್ನು ಪಡೆಯಲು ಸಮಾಜಶಾಸ್ತ್ರ ನೆರವಾಗುತ್ತದೆ, ಇದರ ನೆರವಿನಿಂದ ಕೋಡು ಹಿಡಿದು ಕೆಚ್ಚಲಿನಿಂದ ಹಾಲೂ ಪಡೆಯಲು ಸಾಧ್ಯ ಅನ್ನಿಸತೊಡಗಿತು) ಈ ಪ್ರಶ್ನೆಗೆ ಸೂಕ್ತ ಪರಿಹಾರದ ಉತ್ತರ ಮತ್ತೆ ಅದೇ ಡಾ. ಮಂಜುನಾಥ ಅವರು ನೀಡಿದರು. ದಿಲ್ಲಿಯಲ್ಲಿ ಸಮಾಜಕಾರ್ಯವನ್ನು ಓದಲು ಸಲಹೆ ಮಾಡಿದಲ್ಲದೆ ಆ ಶಿಕ್ಷಣಕ್ಕೆ ಕೆಲವು ಅನುಕೂಲಗಳನ್ನು ಒದಗಿಸಿದ್ದರು. (ದಿಲ್ಲಿ ಸ್ಕೂಲ್ ಆಫ್ ಸೋಸಿಯಲ್ ವರ್ಕ್ ಪ್ರವೇಶ ಪಡೆಯಲು ಅಭ್ಯರ್ಥಿಗಳಿಗೆ ಭಾರತದ ನಾನಾ ಕಡೆ ಸೂಕ್ತ ಸಂಪರ್ಕ ವ್ಯಕ್ತಿಗಳನ್ನು ನೇಮಕ ಮಾಡಿತ್ತು. ಕರ್ನಾಟಕದ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿಯ ಕೋದಂಡರಾಮಯ್ಯನವರು ಅಂಥ ಸಂಪರ್ಕ ವ್ಯಕ್ತಿಯಾಗಿದ್ದರು. ಅವರು ನನ್ನನ್ನು ಸಂದರ್ಶಿಸಿ, ನನಗೆ ಪ್ರವೇಶ ಪಡೆಯಲು ಅರ್ಹತೆಯಿದೆ ಎಂಬ ಶಿಫಾರಸು ಮಾಡಿದುದರಿಂದ ನಾನು ಆ ಪ್ರಶಿಕ್ಷಣ ಶಾಲೆಯಲ್ಲಿ ಅಧ್ಯಯನ ಮಾಡಲು ಸಾಧ್ಯವಾಯ್ತು). ದಿಲ್ಲಿಯ ವೈ.ಡಬ್ಲ್ಯೂ, ಸಿ.ಎ. ಸಂಸ್ಥೆಯು ಖಾಸಗಿಯಾಗಿ ಸ್ಥಾಪಿಸಿದ್ದ ಆ ಶಾಲೆಯು ಆ ವೇಳೆಗೆ (1956 ರೊಳಗೆ) ದಿಲ್ಲಿ ವಿಶ್ವವಿದ್ಯಾಲಯದ ಕಕ್ಷೆಗೆ ಬಂದು ವಿಶ್ವವಿದ್ಯಾಲಯದ ಒಂದು ವಿಭಾಗವಾಗಿಯೂ ಕಾರ್ಯ ಮಾಡುತ್ತಿತ್ತು. ಆಗ ಕರ್ನಾಟಕದವರೇ ಆದ ಧೀಮಂತ ಪ್ರೊ. ಎಂ.ಎಸ್. ಗೋರೆಯವರು ಆ ಕಾಲೇಜಿನ ಪ್ರಾಂಶುಪಾಲರಾಗಿದ್ದರು. ಉತ್ತರ ಕನ್ನಡ ಜಿಲ್ಲೆಯಿಂದ ಬಂದಿದ್ದ ಪ್ರೊ. ಶಂಕರ ಪಾಠಕ ಇವರು ಪ್ರಶಿಕ್ಷಕರಾಗಿದ್ದರು. ಇವರಿಂದಾಗಿ ದೂರದ ದಿಲ್ಲಿಯು ನನಗೆ ಹತ್ತಿರವೇ ಆಯಿತು. ಅಲ್ಲಿನ ಚಿಕ್ಕದಾದರೂ ಚೊಕ್ಕದಾದ, ಆತ್ಮೀಯವಾದ ವಾತಾವರಣ ಉಳ್ಳ, ಭಾರತದ ನಾನಾ ಕಡೆಯಿಂದ ಬಂದಿದ್ದವರ ಸಹ ಜೀವನದಿಂದ ನನ್ನ ಸಮಾಜಶಾಸ್ತçಕ್ಕೆ ನವಿನ ಆಯಾಮ ದೊರೆಯಿತು, ವೃತ್ತಿಸ್ವತ್ವದ ಅಂಕುರಾರ್ಪಣವಾಯ್ತು. ಹಾಗೆಯೇ ಬಹಿರ್ಮುಖತೆಯು ವಿಸ್ತಾರಗೊಳ್ಳಲು ಆರಂಭವಾಯ್ತು. ದಿಲ್ಲಿಯಲ್ಲಿ ಅಧ್ಯಯನ ಮಾಡಿದ ನಂತರ ಕೊಯಮುತ್ತೂರಿನಲ್ಲಿ, ಖಾಸಗಿ ಕಾಲೇಜೊಂದು ಅದೇ ಆರಂಭಿಸುತ್ತಿದ್ದ ಸ್ನಾತಕೋತ್ತರ ಸಮಾಜಕಾರ್ಯ ಶಾಲೆಯಲ್ಲಿ ನೇಮಕಗೊಂಡು (1956) ಒಂದು ವರ್ಷ ದುಡಿದು ನಂತರ ಗುಲಬರ್ಗಾದ ಸ್ನಾತಕಕಾಲೇಜಿನಲ್ಲಿ ಸಮಾಜಶಾಸ್ತçದ ಉಪನ್ಯಾಸಕನಾಗಿ ಸುಮಾರು ಎರಡು ವಾರಗಳು ಕೆಲಸ ಮಾಡಿ, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕನಾಗಿ ಕೆಲಸಮಾಡಿ (ಸುಮಾರು 15 ವರ್ಷ - 1959 ರಿಂದ 1974) ಬೆಂಗಳೂರು ವಿಶ್ವವಿದ್ಯಾಲಯದಲ್ಲಿ 1974ರಲ್ಲಿಯೇ ಆರಂಭವಾಗಿದ್ದ ಸಮಾಜಕಾರ್ಯ ವಿಭಾಗದ ಮುಖ್ಯಸ್ಥನಾಗಿ ನೇಮಕಗೊಂಡೆ. ಆ ಕೆಲಸದಲ್ಲಿಯೇ ಇದ್ದಾಗ ವಾರಣಾಸಿಯ ಕಾಶಿ ವಿದ್ಯಾಪೀಠ ವಿಶ್ವವಿದ್ಯಾಲಯದ (ಇತ್ತೀಚೆಗೆ ಇದನ್ನು ಮಹಾತ್ಮ ಗಾಂಧಿ ಕಾಶಿ ವಿದ್ಯಾಪೀಠ ವಿಶ್ವವಿದ್ಯಾಲಯವೆಂದು ನಾಮಕರಣಗೊಂಡಿದೆ) ಪಿಎಚ್.ಡಿ. ಪದವಿಯನ್ನು ಗಳಿಸಿದೆ. ಈ ಸಂಶೋಧನೆಗೆ ನೆರವಾದವರು ಹಿರಿಯ ಪ್ರಾಧ್ಯಾಪಕ ಡಾ. ಸಿ.ಪಿ. ಗೋಯಲ್ ಮತ್ತು ಜಿ.ಆರ್. ಮದನ್. ಪ್ರಯೋಗಶೀಲತೆ ಕರ್ನಾಟಕ ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳಲ್ಲಿ ಅಧ್ಯಾಪಕ ಕಾರ್ಯದಲ್ಲಿದ್ದಾಗ ಮತ್ತು ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕನಾಗಿ (1992-94) ಕಾರ್ಯ ನಿರತನಾಗಿದ್ದಾಗ ವಿವಿಧ ತೆರನ ಸಮಾಜಕಾರ್ಯ ಪ್ರಯೋಗಗಳನ್ನೂ, ಸಮಾಜಕಾರ್ಯ ಸಾಹಿತ್ಯ ರಚನೆಯಲ್ಲೂ ಹಾಗೂ ಪ್ರಕಟಣೆಯಲ್ಲಿ ಆಸ್ಥೆಯನ್ನೂ ತಳೆದಿದ್ದೆ. ಸಮಾಜಕಾರ್ಯ ಕ್ಷೇತ್ರಕಾರ್ಯದಲ್ಲಿ ಸಂಶೋಧನೆಯ ವಲಯದಲ್ಲಿ, ಭೋದನೆಯ ಕ್ರಿಯೆಯಲ್ಲಿ ಮತ್ತು ಸಮಾಜಕಾರ್ಯ ಪ್ರಶಿಕ್ಷಕರ, ಕಾರ್ಯಕರ್ತರ ಸಂಘಟನೆಯಲ್ಲಿ (ದೇಶೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ) ಸಂತೃಪ್ತಿಯಲ್ಲದಿದ್ದರೂ ಅತೃಪ್ತಿಯಲ್ಲದ ರೀತಿಯಲ್ಲಿ-ಕಾರ್ಯನಿರತನಾಗಿದ್ದೆ. ವಿದೇಶೀ ವಾತಾವರಣ ಸಮಾಜಕಾರ್ಯ ಪ್ರಶಿಕ್ಷಣ ಮತ್ತು ಆಚರಣೆಯ ವಲಯವು ಆಗ ಭಾರತದಲ್ಲಿ ಎಳೆಯದು, ಕೇವಲ ಎರಡು ದಶಕಗಳದ್ದು (ಮುಂಬೈಯಲ್ಲಿ 1936ರಲ್ಲಿ ಮೊಟ್ಟ ಮೊದಲ ವೃತ್ತ್ಯಾತ್ಮಕ ಸಮಾಜಕಾರ್ಯ ಪ್ರಶಿಕ್ಷಣಶಾಲೆಯು ಆರಂಭವಾಗಿತ್ತು. ನಾನು ದಿಲ್ಲಿಯಲ್ಲಿ ಸಮಾಜಕಾರ್ಯ ಪ್ರಶಿಕ್ಷಣದಲ್ಲಿದ್ದದ್ದು 1956-58), ಮತ್ತು ಅದು ಅಂದು ಪಾಶ್ಚಾತ್ಯ ರೂಪಧಾರಿಯೇ ಆಗಿತ್ತು. ಭಾರತದ ನೆಲದಲ್ಲಿ ಪಾಶ್ಚಾತ್ಯ ಪ್ರಶಿಕ್ಷಣದ ಸಸಿಯೊಂದು ಬೆಳೆಯುತ್ತಿತ್ತು. ಪಠ್ಯಕ್ರಮವಾಗಲಿ, ಕ್ಷೇತ್ರಕಾರ್ಯವಾಗಲಿ, ಸಮಾಜಕಾರ್ಯ ಆಚರಣೆಯ ಪದ್ಧತಿಯಾಗಲಿ ಹೊಸತು ಹೊಸತು. ಸಮಾಜವನ್ನು, ಅದರ ರಚನೆ-ಕ್ರಿಯೆಯನ್ನು ಅದರ ಬದಲಾವಣೆ ಸಮಸ್ಯೆಗಳನ್ನು, ಅದರ ಸಂಪನ್ಮೂಲ ಪರಿಹಾರ ಕ್ರಮಗಳನ್ನು ಅನ್ಯ ದೇಶೀಯ ದೃಷ್ಟಿಯಿಂದಲೇ ಪರಿಗ್ರಹಿಸಲಾಗುತ್ತಿತ್ತು. ಭಾರತದ ಭವ್ಯ ಇತಿಹಾಸ, ಆಳವಾದ ಸಂಸ್ಕೃತಿ, ಸಮಸ್ಯೆಯ ಪರಿಹಾರದ ಪದ್ಧತಿಯು ಹೊಸ ವೃತ್ತಿಗೆ ಹಿನ್ನೆಲೆಯಾಗಬೇಕೆಂಬ ಚಿಂತನೆಯು ಇನ್ನೂ ಮೊಳಕೆಯಲ್ಲೇ ಇತ್ತು. ನಾವು ಅಂದು ಅಧ್ಯಯನಕ್ಕೆ ಅಂಗೀಕರಿಸಿದ್ದುದು ಪಾಶ್ಚಾತ್ಯ (ಅದರಲ್ಲೂ ಅಮೆರಿಕೆ ಮತ್ತು ಇಂಗ್ಲೆಂಡ್‌ನಿಂದ ಪ್ರಕಟಗೊಂಡ) ಪಠ್ಯ ಪುಸ್ತಕಗಳೇ ಆಗಿದ್ದವು (ಈಗಲೂ ಈ ಪರಿಸ್ಥತಿಯು ತುಂಬಾ ಬದಲಾಗಿದೆ ಎಂದೇನೂ ತೋರುತ್ತಲಿಲ್ಲ. ಬದಲಿಗೆ ಜಾಗತೀಕರಣದ ಬೀಸಿನಲ್ಲಿ ಪಾಶ್ಚಾತ್ಯ ಪ್ರಭಾವವು ಇನ್ನೂ ಪ್ರಗಾಢವಾಗುತ್ತಲೇ ಸಾಗಿದೆ) ಆದರೆ, ಸ್ವಾತಂತ್ರ್ಯ ಹೋರಾಟದ, ದೇಶದ ಬಿಡುಗಡೆಯ, ಹೊಸ ರಾಷ್ಟ್ರದ ಉದಯದ, ಸ್ವತಂತ್ರ ಸಂವಿಧಾನದ ಅಂಗೀಕಾರದ, ಅಭಿವೃದ್ಧಿ, ಯೋಜನೆಯ ಆರಂಭದ, ಗಾಂಧಿಯವರ ರಚನಾತ್ಮಕ ಕಾರ್ಯಕ್ರಮಗಳ ಪ್ರಭಾವದ ಕಾರಣಗಳಿಂದ ಸಮಾಜಕಾರ್ಯ ನವೀನ ತಿರುವು ಪಡೆಯುವಂತಾಯ್ತು. ಹಿಂದಿನ ಶತಮಾನದ ಮಧ್ಯಕಾಲವು ಸಮಾಜಕಾರ್ಯಕ್ಕೆ ಮನ್ವಂತರದ ಕಾಲವೇ ಆಗಿತ್ತು. ಸಮಾಜಕಾರ್ಯವು ಒಂದು ಸ್ವತಂತ್ರ, ಬಲಿಷ್ಠ ವೃತ್ತಿಯಾಗಿ ಬೆಳೆಯಲು, ಅದರಲ್ಲೂ ಭಾರತೀಯ ಜೀವನದ ಉಸಿರು ಅದರ ನರನಾಡಿಗಳಲ್ಲಿ ಹರಿದಾಡಲು, ಪ್ರಯತ್ನಗಳು ನಡೆಯತೊಡಗಿದವು. ನಾನು ಪ್ರಶಿಕ್ಷಕನಾಗಿ (ತಮಿಳುನಾಡಿನ ಕೊಯಮ್ಮತ್ತೂರಿನಲ್ಲಿ) ಕಾರ್ಯತೊಡಗಿ, ಅಲ್ಲಿಂದ ಕರ್ನಾಟಕಕ್ಕೆ ಹಿಂದಿರುಗಿ (ಗುಲಬರ್ಗಾ-ಧಾರವಾಡ) ಇಲ್ಲಿ ಸಮಾಜಶಾಸ್ತ್ರ-ಸಮಾಜಕಾರ್ಯ ಕ್ಷೇತ್ರಗಳೆರಡಲ್ಲೂ ಈಜತೊಡಗಿದ ಸಂದರ್ಭದಲ್ಲಿಯೇ (ಆರನೆಯ ದಶಕದಲ್ಲಿ) ಸಮಾಜಕಾರ್ಯದ ವೃತ್ತಿಗೆ ಅಗತ್ಯವಾದ ಸಾಂಘಿಕ ಪ್ರಯತ್ನಗಳು ನಡೆದು ಅಖಿಲ ಭಾರತ ಮಟ್ಟದಲ್ಲಿ ಸಮಾಜಕಾರ್ಯ ಪ್ರಶಿಕ್ಷಣ ಶಾಲೆಗಳ ಒಂದು ಮಹಾಸಂಘ (ASSWI- Association of Schools of Social Work in India) ಮತ್ತು ವೃತ್ತಿ ತರಬೇತಿ ಪಡೆದ ಸಮಾಜಕಾರ್ಯಕರ್ತರ ಮಹಾ ಸಂಘ (IATSW - Indian Association of Trained Social Workers) ಸ್ಥಾಪನೆಯಾಗಿ ಉತ್ಸಾಹದಿಂದಲೇ ಕಾರ್ಯನಿರತವಾದವು. ಎರಡನೆಯ ಸಂಘವು ಒಂದು ಮಾಹಿತಿ ಪತ್ರಿಕೆಯನ್ನು ಹೊರತಂದು ಕೆಲವುವರ್ಷಗಳು ನಡೆಸಿ, ನಿಲ್ಲಿಸಿತು ಆಗ ಸಮಾಜಕಾರ್ಯ ಪ್ರಶಿಕ್ಷಣ ಶಾಲೆಗಳು (ಅವನ್ನು ಅಮೆರಿಕೆಯ ಮಾದರಿಯಲ್ಲಿಯೇ ಶಾಲೆ- School - ಎಂದೇ ಕರೆಯಲಾಗುತ್ತಿತ್ತು: ಅದಕ್ಕೂ ಸ್ಪಲ್ಪ ಹೆಚ್ಚಿನ ಮಟ್ಟದ್ದೆಂದು ಭಾವಿಸಬಹುದಾಗಿದ್ದ `ಸಂಸ್ಥೆ’ Institution ಶಬ್ದವೂ ಬಳಕೆಯಲ್ಲಿತ್ತು). ಭಾರತದ ಪ್ರಮುಖ ಮಹಾನಗರಗಳಾದ ಬಾಂಬೆ, ಮದ್ರಾಸು, ದಿಲ್ಲಿ, ಆಗ್ರ, ಲಕ್ನೋ, ಬರೋಡ ಇಂತಹ ಸ್ಥಳಗಳಲ್ಲಿ ಖಾಸಗಿಯಾಗಿ ಆರಂಭಗೊಂಡಿದ್ದವು, ಮತ್ತು ಡಿಪ್ಲೊಮಾ ಪ್ರಶಸ್ತಿಗಳನ್ನು ತರಬೇತಿಪಡೆದವರಿಗೆ ನೀಡುತ್ತಿದ್ದವು. ಕ್ರಮೇಣ ಮಹಾನಗರಗಳಲ್ಲದ, ಆದರೆ, ವಿಸ್ತಾರಗೊಳ್ಳುತ್ತಿದ್ದ ನಗರಗಳಲ್ಲಿ ಖಾಸಗಿಯಾಗಿಯೇ ಇಂಥ ಶಾಲೆಗಳು ಆರಂಭವಾಗತೊಡಗಿದವು. ಅಂಥವುಗಳಲ್ಲಿ ಒಂದರ ಆರಂಭವಾದದ್ದು ಕೊಯಮ್ಮತ್ತೂರಿನಲ್ಲಿ (1958); ಅದರ ಸ್ಥಾಪನೆಯಲ್ಲಿ ನಾನೂ ಪ್ರಶಿಕ್ಷಕನಾಗಿ ಪಾಲುಗೊಳ್ಳಲು ಅವಕಾಶವಾಯ್ತು. ವಿಶ್ವವಿದ್ಯಾಲಯದ ಕಕ್ಷೆಗೆ... ವಿಶ್ವವಿದ್ಯಾಲಯಗಳಿಂದ ದೂರವೇ ಉಳಿದಿದ್ದ ಸಮಾಜಕಾರ್ಯ ಪ್ರಶಿಕ್ಷಣ ಶಾಲೆಗಳು ಕ್ರಮೇಣ ಅವುಗಳ ಕಕ್ಷೆಯೊಳಗೆ ಬರಲು ಕಳೆದ ಶತಮಾನದ ಐದನೆಯ ದಶಕದಲ್ಲಿ ತೊಡಗಿದವು. ಮುಂಬೈನಲ್ಲಿ ಮೊಟ್ಟಮೊದಲು (1936) ಆರಂಭವಾಗಿದ್ದ ಪ್ರಶಿಕ್ಷಣಶಾಲೆಯೇ (Sir Dorabji Tata Graduate School of Social Work) Tata Institute of social sciences ಎಂದು ಪರಿವರ್ತನೆಗೊಂಡು ಒಂದು ಡೀಮ್ಡ್ ವಿಶ್ವವಿದ್ಯಾಲಯವಾಗಿ ಕಳೆದು ಶತಮಾನದ ಆರನೆಯ ದಶಕದಲ್ಲಿ ಆಯ್ತು, (ಅದೇ ಈಗಲೂ ಭಾರತದಲ್ಲಿರುವ ಏಕೈಕ ಸಮಾಜಕಾರ್ಯ ವಿಶ್ವವಿದ್ಯಾಲಯ) ವಿಶ್ವ ವಿದ್ಯಾಲಯಗಳಿಗೆ ಸಂಲಗ್ನಗೊಳ್ಳತೊಡಗಿದ ಶಾಲೆಗಳು `ಡಿಪ್ಲೊಮಾ’ಬದಲು ಸ್ನಾತಕೋತ್ತರ ಪದವಿಗಳನ್ನು (ಎಂ.ಎ. ಅಥವಾ ಎಂ.ಎಸ್.ಡಬ್ಲ್ಯೂ) ನೀಡತೊಡಗಿದವು. ಸಮಾಜಕಾರ್ಯಕ್ಕೆ ನಿಕಾಯ (Faculty) ಸ್ಥಾನವನ್ನು ದಿಲ್ಲಿ, ಲಖ್ನೊ, ಆಗ್ರಾ, ವಡೋದರ ಶಾಲೆಗಳು / ವಿಭಾಗಗಳು ಪಡೆಯತೊಡಗಿದವು. ಇತ್ತೀಚೆಗೆ ಸಾಮಾನ್ಯವಾಗಿ ಎಲ್ಲ ವಿಶ್ವ ವಿದ್ಯಾಲಯಗಳು ಸ್ನಾತಕೋತ್ತರ ಪದವಿ ವಿಭಾಗಗಳನ್ನು ಆರಂಭಿಸುವುದರ ಜೊತೆಗೆ ಎಂ.ಎಸ್.ಡಬ್ಲ್ಯೂ. ನಾಮಕರಣದ ಪದವಿಗಳನ್ನು ನೀಡತೊಡಗಿದವು. ಭಾರತದ ಸ್ಥಿತಿ ಭಾರತದಲ್ಲಿ ಸಮಾಜಕಾರ್ಯ ಪ್ರಶಿಕ್ಷಣವು ಖಾಸಗಿ ಶಾಲೆಗಳ ಮೂಲಕ ಕಳೆದ ಶತಮಾನದ ನಾಲ್ಕನೆಯ ದಶಕದಲ್ಲಿ ಆರಂಭವಾಗಿ, ಕ್ರಮೇಣ ವಿಶ್ವವಿದ್ಯಾಲಯಗಳಿಗೆ ಐದನೆಯ ದಶಕದಲ್ಲಿ ಸಂಲಗ್ನಗೊಂಡು ವಿಶ್ವವಿದ್ಯಾಲಯಗಳೇ ಸ್ನಾತಕೋತ್ತರ ವಿಭಾಗಗಳನ್ನು ಆರಂಭಿಸಿ, ಖಾಸಗಿಯಾಗಿ ಆರಂಭಗೊಂಡ ಶಾಲೆ/ ಸಂಸ್ಥೆ / ವಿಭಾಗಳಿಗೆ ಸಂಲಗ್ನ ಪ್ರದಾನ ಮಾಡತೊಡಗಿದವು. ವಿಶ್ವವಿದ್ಯಾಲಯ ಅನುದಾನ ಆಯೋಗವು (UGC) ಸಮಾಜಕಾರ್ಯದ ಬಲಿಷ್ಠತೆಗಾಗಿ ಮೂರು ಸಲ ಸಮಿತಿಗಳನ್ನು ನೇಮಿಸಿ, ವರದಿಗಳನ್ನು ಪ್ರಕಟಿಸಿದೆ. ಆರಂಭದಲ್ಲಿ ಭಾರತದ ಅಲ್ಲ್ಲಲ್ಲಿ ಬೆರಳೆಣಿಕೆಯಲ್ಲಿ-ಪ್ರಮುಖವಾಗಿ ಮಹಾನಗರಗಳಲ್ಲಿ, ಆನಂತರ ನಗರಗಳಲ್ಲಿ ಆರಂಭವಾಗಿ ತದನಂತರ ಪಟ್ಟಣಗಳಲ್ಲಿ ಸಮಾಜಕಾರ್ಯದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಪ್ರಶಿಕ್ಷಣ ಸಂಸ್ಥೆಗಳು ಅಣಬೆಗಳೋಪಾದಿಯಲ್ಲಿ ತಲೆ ಎತ್ತುತ್ತಿವೆ. ನನ್ನ ಪರಿಶೋಧನೆಯ ಪ್ರಕಾರ ಇಡೀ ಭಾರತದಲ್ಲಿ-ಸಂಖ್ಯಾದೃಷ್ಟಿಯಿಂದ-ಕರ್ನಾಟಕವು ಮೊದಲ ಸ್ಥಾನದಲ್ಲಿದೆ. ಇಲ್ಲಿ ಅವುಗಳ ಸಂಖ್ಯೆ ಎಂಬತ್ತನ್ನು ದಾಟಿದೆ*. ಇವೆಲ್ಲವೂ ಸ್ಥಳೀಯ ವಿಶ್ವವಿದ್ಯಾಲಯಗಳಿಗೆ ಸಂಲಗ್ನಗೊಂಡಿವೆ. ಇವುಗಳಲ್ಲದೆ ವಿವಿಧ ತೆರನ ತರಬೇತಿ ವ್ಯವಸ್ಥೆಗಳೂ ಇವೆ. ಕರ್ನಾಟಕದಲ್ಲಿ... ಕರ್ನಾಟಕದಲ್ಲಿ ಮೊಟ್ಟಮೊದಲು ಸಮಾಜಕಾರ್ಯದಲ್ಲಿ ಸ್ನಾತಕೋತ್ತರ ಪದವಿಯ ಕೋರ್ಸನ್ನು ಆರಂಭಿಸಿದ್ದುದು (1962ರಲ್ಲಿ) ಕರ್ನಾಟಕ ವಿಶ್ವವಿದ್ಯಾಲಯ. ಆ ಉಪಕ್ರಮದ ಪ್ರಕ್ರಿಯೆಗೆ ಚಾಲನೆ ನೀಡುವ ಸದವಕಾಶ ನನಗೆ ದೊರೆಯಿತು. ಯಾಕೆಂದರೆ ಆ ವಿಶ್ವವಿದ್ಯಾಲಯದ ಸಮಾಜಶಾಸ್ತ್ರದ ಉಪನ್ಯಾಸಕನಾಗಿ ಸೇರಿದ್ದ ನನ್ನನ್ನು ಅದೇ ವಿಶ್ವವಿದ್ಯಾಲಯದಲ್ಲಿ ನೂತನವಾಗಿ ಆರಂಭವಾಗಿದ್ದ ಸಾಮಾಜಿಕ ಮಾನವಶಾಸ್ತ್ರದ ಮುಖ್ಯಸ್ಥರಾಗಿ ನೇಮಕಗೊಂಡಿದ್ದ ಉತ್ಸಾಹಿ ಡಾ. ಕೆ. ಈಶ್ವರನ್ ನನ್ನ ಸಲಹೆಯನ್ನು ಅಂಗೀಕರಿಸಿ, ಅಂದಿನ ಕುಲಪತಿ ರ್ರಾಂಗ್ಲರ್ ಡಿ.ಸಿ. ಪಾವಟೆಯವರ ನೆರವಿನಿಂದ ಸಮಾಜಕಾರ್ಯದ ಸ್ನಾತಕೋತ್ತರ ಕೋರ್ಸ್ ಸಾಮಾಜಿಕ ಮಾನವಶಾಸ್ತ್ರದ ವಿಭಾಗದಲ್ಲಿ ಆರಂಭವಾಯ್ತು. ಆ ಕೋರ್ಸ್ನಿಂದ ಮೊದಲು ತರಬೇತಿ ಪಡೆದವರು. ಎಂ.ಎ (ಸೋಸಿಯಲ್ ವೆಲ್‌ಫೇರ್) ಎಂದೂ, ಅನಂತರದವರು ಎಂ.ಎ. (ಸೋಸಿಯಲ್ ವರ್ಕ್) ಮತ್ತು ಇತ್ತೀಚೆಗೆ ಎಂ.ಎಸ್.ಡಬ್ಲ್ಯೂ ಪದವಿಯನ್ನು ಪಡೆಯುತ್ತಿದ್ದಾರೆ. ಅದೇ ವರ್ಷ (1962) ಬೆಂಗಳೂರಿನಲ್ಲಿ ಖಾಸಗಿ ಶಾಲೆಯೊಂದು ಆರಂಭವಾಗಿ ಅದು ಸ್ನಾತಕೋತ್ತರ ಡಿಪ್ಲೊಮಾ ನೀಡತೊಡಗಿತು. (DSSA) ಇದೇ ಶಾಲೆಯು ಮುಂದೆ (1974)ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಭಾಗವಾಗಿ ರೂಪಾಂತರಗೊಂಡಿತು. ನಾನು 1974ರಲ್ಲಿಯೇ (ಡಿಶಂಬರ) ಆ ವಿಭಾಗದ ಮುಖ್ಯಸ್ಥನಾಗಿ ನೇಮಕಗೊಂಡೆ. ಸಮಾಜಶಾಸ್ತ್ರ-ಸಮಾಜಕಾರ್ಯ ನಾನು ಸಮಾಜಕಾರ್ಯ ಕ್ಷೇತ್ರವನ್ನು ಪ್ರಶಿಕ್ಷಣದ ಮೂಲಕ ಪ್ರವೇಶಿಸಿದ್ದುದು 1956ರಲ್ಲಿ. ಅದು ಸಮಾಜಶಾಸ್ತ್ರವನ್ನು ಅಧ್ಯಯನ ಮಾಡಿದ ಮೇಲೆ ಸಮಾಜಶಾಸ್ತ್ರ ಮತ್ತು ಸಮಾಜಕಾರ್ಯ ಜ್ಞಾತಿ ಶಿಸ್ತುಗಳು. ಸಮಾಜದಲ್ಲಿನ ಅಸ್ವಸ್ಥ ಸ್ಥಿತಿಯನ್ನು ಪರಿಹರಿಸಲು ಕೈಗೊಂಡ ಸಾಹಸಯಾತ್ರೆಯು ಸಿದ್ಧಾಂತದ ಕವಲಾಗಿ ಸಮಾಜಶಾಸ್ತ್ರವಾಗಿಯೂ, ಆಚರಣೆಯ ಕವಲಾಗಿ ಸಮಾಜಕಾರ್ಯವು ವಿಕಸನಗೊಂಡವು ಎಂಬುದು ನಾನು ಗುರುತಿಸಿದ ಇತಿಹಾಸದ ಹೆಜ್ಜೆಗಳು. ಈ ತೆರನಾಗಿ ಇತರರೂ ಗುರುತಿಸಿದ್ದರು ಮೊದಲೇ ಎಂಬುದೇನೂ ಸುಳ್ಳಲ್ಲ. ನಾನು ಅರ್ಥೈಸಿಕೊಂಡಂತೆ, ಆಧುನಿಕ ಸಮಾಜಶಾಸ್ತ್ರದ ಜನಕನೆಂದು ಪ್ರಖ್ಯಾತನಾಗಿರುವ ಆಗಸ್ಟ್ಕೋಂಟ್ ಅಸ್ವಸ್ಥ ಸಮಾಜಕ್ಕೆ ಸ್ವಸ್ಥ ಮಾರ್ಗವನ್ನು ಕಂಡುಕೊಳ್ಳಲು ತೊಡಗಿ ಸಮಾಜಶಾಸ್ತ್ರ ಶಿಸ್ತನ್ನು ಕಂಡರಿಸಿದ. ಈ ಕಾರಣದಿಂದಲೂ ಐತಿಹಾಸಿಕವಾಗಿ ಸಮಾಜಶಾಸ್ತ್ರ ಮತ್ತು ಸಮಾಜಕಾರ್ಯ ಅವಳಿ ಜವಳಿಗಳಾಗಿಯೇ ಮೈದೋರಿವೆ. ನನ್ನ ಶೈಕ್ಷಣಿಕ ಜೀವನದಲ್ಲೂ, ಕಾಣದ ಕೈಯೊಂದು ಈ ಎರಡೂ ಶಿಸ್ತುಗಳನ್ನು ಒಂದಾದ ಮೇಲೊಂದು ಪ್ರವೇಶಿಸಲು ಕೆಲಸ ಮಾಡಿತ್ತೆಂದು ತೋರುತ್ತದೆ. ಈ ಎರಡೂ ಶಿಸ್ತುಗಳಿಗೆ ಆರಂಭದಲ್ಲಿ ನನ್ನೊಳಗನ್ನು ಆವರಿಸಿಕೊಂಡಿದ್ದ ಸಾಹಿತ್ಯ ಶಿಸ್ತು ಈ ಎರಡೂ ವೈಜ್ಞಾನಿಕ ಶಿಸ್ತುಗಳನ್ನು ಬೆಸೆಯುವಲ್ಲಿ ಯಶಸ್ವಿಯಾಗಿದೆ ಅನ್ನಿಸುತ್ತದೆ. ಈ ಬೆಸುಗೆಯ ಪ್ರಕ್ರಿಯೆಯಲ್ಲಿ ನನ್ನ ವ್ಯಕ್ತಿತ್ವವು ಅಂತರ್ಮುಖಿತನದಿಂದ ಬಹಿರ್ಮುಖಿತನಕ್ಕೆ ವಿಕಸನಗೊಂಡುದನ್ನು ನಾನು ಕಂಡು ಕೊಂಡಿದ್ದೇನೆ, ಅನ್ನಿಸುತ್ತದೆ.
ನನ್ನ ನಿಲುವು ನನ್ನ ಜೀವನದ ಕೊನೆಯಲ್ಲಿ ನನ್ನ ನಿಲುವನ್ನು (ಭಾವನೆಗಳು, ಅಭಿಪ್ರಾಯಗಳು, ಅನುಭವಗಳು, ತತ್ತ್ವಾದರ್ಶಗಳು, ಇತ್ಯಾದಿಗಳನ್ನು ಒಳಗೊಂಡ ಸಂಯುಕ್ತ ಸಂಗತಿಯನ್ನು) ಈ ಮುಂದಿನಂತೆ ಅಭಿವ್ಯಕ್ತಗೊಳಿಸಲು ಬಯಸುತ್ತೇನೆ. ಕರ್ನಾಟಕಕ್ಕೇ ದೃಷ್ಟಿಯನ್ನು ಸೀಮಿತಗೊಳಿಸಿದರೆ, ಆಗಬೇಕಾದ ಕೆಲಸಗಳೆಂದರೆ ಇವು:
-ಡಾ. ಎಚ್.ಎಂ. ಮರುಳಸಿದ್ಧಯ್ಯ (ನಿವೃತ್ತ ಪ್ರಾಧ್ಯಾಪಕ, ಸಮಾಜಕಾರ್ಯ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ)
0 Comments
Leave a Reply. |
Categories
All
RAMESHA NIRATANKA ಉಲ್ಲಾಳು ವಾರ್ಡಿನ ಸಮಸ್ತ ನಾಗರೀಕರನ್ನು ಒಂದೇ ವೇದಿಕೆಯಡಿಯಲ್ಲಿ ತರಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಸಮಾಜದ ವಿವಿಧ ಕ್ಷೇತ್ರದ 50,000 ಕ್ಕೂ ಹೆಚ್ಚು ಸದಸ್ಯರು ನಿರಾತಂಕ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಒಡನಾಟದಲ್ಲಿದ್ದಾರೆ. ಹಲವಾರು ಸಮಾಜ ಸೇವಾ ಕಾರ್ಯಗಳಲ್ಲಿ ನಿರಾತಂಕ ಸಂಸ್ಥೆಗೆ ಬೆಂಬಲವನ್ನು ನೀಡುತ್ತಿದ್ದಾರೆ. ತಾವೂ ಕೂಡ ನಮ್ಮೊಂದಿಗೆ ಕೈ ಜೋಡಿಸಲು ಮತ್ತು ಬೆಂಬಲಿಸಲು “8088433026” ನಂಬರ್‌ಗೆ “NIRATHANKA” ಎಂದು ಸಂದೇಶವನ್ನು ಕಳುಹಿಸಿಕೊಡಬಹುದು.
|