Ramesha Niratanka
  • Home
  • TEAM MEMBERS
  • Biography
  • Blog
  • Media and Gallery
  • Job Openings
  • Join Our Online Groups
  • Online Store
  • Nirathanka Citizens Connect
  • Contact
  • Home
  • TEAM MEMBERS
  • Biography
  • Blog
  • Media and Gallery
  • Job Openings
  • Join Our Online Groups
  • Online Store
  • Nirathanka Citizens Connect
  • Contact
  • General Books
  • >
  • ಡಾ. ಎಚ್.ಎಂ. ಮರುಳಸಿದ್ಧಯ್ಯ (ಜೀವನದ ಕೆಲವು ಸೆಳಕುಗಳು)

ಡಾ. ಎಚ್.ಎಂ. ಮರುಳಸಿದ್ಧಯ್ಯ (ಜೀವನದ ಕೆಲವು ಸೆಳಕುಗಳು)

SKU:
$0.00
Unavailable
per item
ಸಂಕ್ಷಿಪ್ತ ಜೀವನ ಚರಿತ್ರೆ
ನಿರ್ಮಲ ಕರ್ನಾಟಕ ಪರಿಕಲ್ಪನೆಯ ರೂವಾರಿ, ಒಳ-ಹೊರಗಿನ ಪರಿಸರದ ಪರಿಶುದ್ಧತೆಗೆ ತುಡಿಯುತ್ತಿರುವ ಜೀವ, ಸಕಲ ಜೀವಾತ್ಮರು ಲೇಸಿನಿಂದಿರಲು ಅವುಗಳ ಆವರಣದ ಸಂರಕ್ಷಣೆಗೆ ಕಾಳಜಿಯನ್ನು ಅಡಿಗಡಿಗೆ ಪ್ರಕಟಿಸುವ ಪ್ರಜ್ಞಾವಂತ, ತನ್ನ ಹಂಬಲಕ್ಕೆ ಧಕ್ಕೆಯಾದಾಗ ಖಿನ್ನನಾಗುವ ಕಳವಳಿಸುವ ಮನಸ್ಸಿನ, ಸಮಾಜ ಶಾಸ್ತ್ರಜ್ಞರಾಗಿದ್ದು, ಕರ್ನಾಟಕದಲ್ಲಿ ಸಮಾಜಕಾರ್ಯ ಪ್ರಶಿಕ್ಷಣವನ್ನು ಸ್ನಾತಕೋತ್ತರ ಮಟ್ಟದಲ್ಲಿ ಆರಂಭವಾಗಲು ಪ್ರವರ್ತನಕಾರರದ ಡಾ. ಎಚ್.ಎಂ. ಮರುಳಸಿದ್ಧಯ್ಯನವರು ನಮ್ಮ ಸಮಕಾಲೀನರಾಗಿದ್ದು, ನಮ್ಮ ನಡುವೆ ಬದುಕಿದ್ದಾರೆ ಎಂಬುದೇ ಒಂದು ಸೌಭಾಗ್ಯ ಎಂದು ಹೇಳಿದರೆ ಏನೇನೂ ಅತಿಶಯೋಕ್ತಿಯಾಗದು. ಶ್ರೀಯುತರ ಬಗ್ಗೆ ತಿಳಿಯುತ್ತಾ ಹೋದಂತೆಲ್ಲಾ, ಜೀವಂತ ದಂತಕತೆಯಾಗಿರುವ ಇವರ ಬಗ್ಗೆ ತಿಳಿಯುವ ಕೌತುಕ ಅಧಿಕಗೊಳ್ಳುತ್ತಾ ಸಾಗಿತು.
​

ಹುಟ್ಟಿದ ಪ್ರದೇಶ :
ಕರ್ನಾಟಕದ ಬಳ್ಳಾರಿ ಜಿಲ್ಲೆಯ ಗ್ರಾಮೀಣ ಸಮುದಾಯದ ಒಂದು ಸಣ್ಣ ಹಳ್ಳಿ ಹಿರೇಕುಂಬಳಗುಂಟೆ. ಇದು ಜಿಲ್ಲೆಯ ಕೂಡ್ಲಿಗೆ ತಾಲ್ಲೂಕಿನ ನೈರುತ್ಯ ದಿಕ್ಕಿನಲ್ಲಿರುವ ಜಿಲ್ಲೆಯ ಕೊನೆಯ ಹಳ್ಳಿ. ಇದರ ಪಶ್ಚಿಮಕ್ಕೆ, ಸುಮಾರು ಅರ್ಧ ಮೈಲು ದೂರದಲ್ಲಿ, ಈಗಿನ ದಾವಣಗೆರೆ ಜಿಲ್ಲೆಯ ಜಗಳೂರು, ತಾಲ್ಲೂಕಿನ ಈಶಾನ್ಯ ಮೂಲೆಯ ಗಡಿ ಇದೆ. ಹೀಗಾಗಿ ಹಳೆಯ ಮೈಸೂರು ಸಂಸ್ಥಾನದ ಮತ್ತು ಹಳೆಯ ಬ್ರಿಟಿಷ್ ಆಡಳಿತೆಗೆ ಸೇರಿದ್ದ ಮದ್ರಾಸು ಆಧಿಪತ್ಯದ ಎರಡೂ ರಾಜಕೀಯ ವಾತಾವರಣವು ಆವರಿಸಿಕೊಂಡಿದ್ದ ಹಳ್ಳಿಗೊಂಚಲು ಇವರು ಹುಟ್ಟಿದ ಸಮುದಾಯ.  ಇವರ ಹುಟ್ಟೂರು ಒಂದು ಕಂದಾಯ ಗ್ರಾಮ ಮತ್ತು ಈಗ ಹತ್ತು ಊರುಗಳನ್ನೊಳಗೊಂಡ, ಪಂಚಾಯತಿಯ ಕೇಂದ್ರಸ್ಥಳ. ಇದಕ್ಕೆ ಸೇರಿದ ಮೂರು ಉಪಗ್ರಾಮಗಳು (ಹ್ಯಾಮ್ಲೆಟ್) ಚಿಕ್ಕ ಸಮುದಾಯಗಳು. ಹಿರೇಕುಂಬಳಗುಂಟೆಯು ಬಹು ಜಾತಿಗಳ ಊರು. ಇಲ್ಲಿ ವೀರಶೈವರು, ದಲಿತ ವರ್ಗಕ್ಕೆ ಸೇರಿದ ಜಾತಿಗಳು-ಮಾದಿಗ ಮುತ್ತು ಚಲುವಾದಿ, ಪಿಂಜಾರ (ಇತ್ತೀಚೆಗೆ ಇವರು ಮುಸಲ್ಮಾನ ಎಂದು ಕರೆದುಕೊಳ್ಳುತ್ತಾರೆ), ಬೇಡ ಅಥವಾ ವಾಲ್ಮೀಕಿ, ಕಮ್ಮಾರ ಜಾತಿಗಳವರಿದ್ದಾರೆ. (ಕೆಲವು ವರ್ಷಗಳ ಹಿಂದೆ ಇಲ್ಲಿ ಅಕ್ಕಸಾಲಿ ಮತ್ತು ಕ್ಷೌರಿಕ ಕುಟುಂಬಗಳಿದ್ದವು; ಕಾರಣಾಂತರಗಳಿಂದ ಇವು ಬೇರೆಡೆಗೆ ವಲಸೆಹೋದವು; ಒಂದು ಈಡಿಗ ಕುಟುಂಬವೂ ಇತ್ತು, ಅದರ ಏಕೈಕ ಸದಸ್ಯೆ ತೀರಿದ ಮೇಲೆ ಅದೂ ಇಲ್ಲವಾಯ್ತು.) ಇಲ್ಲಿನ ವೀರಶೈವರಲ್ಲಿ ಎರಡು ಉಪಗುಂಪುಗಳಿವೆ; ಒಂದು, ಜಂಗಮರದ್ದು (ಇದು ವೀರಶೈವರ ಪುರೋಹಿತರ ಗುಂಪು; ಇದಕ್ಕೆ ಡಾ. ಮರುಳಸಿದ್ಧಯ್ಯ ಸೇರುತ್ತಾರೆ); ಇನ್ನೊಂದು ಕೂಡುಒಕ್ಕಲಿಗರದ್ದು. ಈ ಊರಿಗೆ ಪೂರ್ವದಲ್ಲಿ ಒಂದು ಕಿ.ಮೀ. ದೂರದಲ್ಲಿರುವುದು ಚಿಕ್ಕ ಕುಂಬಳಗುಂಟೆ. ಇದರಲ್ಲಿ ಬಹುಸಂಖ್ಯಾತರು ದಲಿತ ವರ್ಗದ ಮಾದಿಗ ಜಾತಿಯವರು. ಇವರಲ್ಲದೆ ಎರಡು ಮೂರು ಕ್ಷೌರಿಕರ ಎರಡು ಈಡಿಗರ ಕುಟುಂಬಗಳಿವೆ (ಕೆಲವು ವರ್ಷಗಳ ಹಿಂದೆ ಇದ್ದ ಏಕೈಕ ವೀರಶೈವ ಕುಟುಂಬವು ಬೇರೆಡೆಗೆ ವಲಸೆ ಹೋಯಿತು.) ಈ ಊರಿನ ಉತ್ತರಕ್ಕೆ ಅರ್ಧ ಕಿ.ಮೀ. ದೂರದಲ್ಲಿ ಗೊಲ್ಲರಹಟ್ಟಿ ಇದೆ. ಇಲ್ಲಿ ಕೇವಲ ಗೊಲ್ಲರು ಇದ್ದಾರೆ. ಈ ಊರಿನ ಈಶಾನ್ಯಕ್ಕೆ ಅರ್ಧ ಕಿ.ಮೀ. ದೂರದಲ್ಲಿರುವ ದಾಸರೋಬನಹಳ್ಳಿಯಲ್ಲಿ ಕೇವಲ ಬೇಡರ/ವಾಲ್ಮೀಕಿ ಜನರಿದ್ದಾರೆ. ಈ ನಾಲ್ಕೂ ಸಮುದಾಯಗಳು ಜಾತಿಗಳ ದೃಷ್ಟಿಯಿಂದ ವಿಶಿಷ್ಟವಾದವು. ಇಲ್ಲಿನವರೆಲ್ಲಾ ರೈತರು. ಆದರೂ ಇವರು ತೋಟಗಾರಿಕೆ, ಹೈನುಗಾರಿಕೆ, ಚರ್ಮಗಾರಿಕೆ, ಕಿರುಕುಳ ವ್ಯಾಪಾರ, ಕಮ್ಮಾರಿಕೆ, ಕುರಿಸಾಕಣೆ ಇಂತಹ ಉದ್ಯಮಗಳಲ್ಲಿ ನಿರತರಾಗಿದ್ದಾರೆ. (ಹಿಂದೆ ಪಿಂಜಾರರಲ್ಲಿ ಕೆಲವರು ಬಡಗಿಗಳಾಗಿದ್ದರು, ಗಾದೆ/ತಡಿ, ಮುಂತಾದ ವಸ್ತುಗಳ ತಯಾರು ಮಾಡುತ್ತಿದ್ದರು. ಈಗ ಇವೆಲ್ಲಾ ಮರೆಯಾಗಿವೆ).

ಮರುಳಸಿದ್ಧಯ್ಯನವರ ಕುಟುಂಬವೇ (ಇತರ ಜಂಗಮ ಕುಟುಂಬಗಳು ಸೇರಿದಂತೆ) ಅಕ್ಷರಸ್ಥ ಕುಟುಂಬ, ಊರಿನಿಂದ ಹೊರಗಡೆ ನೌಕರಿಗೆ ಹೋದವರೆಂದರೆ ಈ ಕುಟುಂಬದವರೇ. ಆನಂತರದಲ್ಲಿ ಇತರರು ಶಿಕ್ಷಣ ಪಡೆದು, ಪರ ಊರುಗಳಿಗೆ ನೌಕರಿಗಾಗಿ ಹೋಗತೊಡಗಿದರು. ಹೀಗಾಗಿ ವಿವಿಧ ಕಡೆಯ ಅನುಭವಗಳಿಗೆ ಈ ಊರುಗಳ ಸಮುದಾಯ ತೆರೆದುಕೊಂಡಿತು.

ಇದೇ ಗ್ರಾಮೀಣ ಸಮುದಾಯದಲ್ಲಿಯೇ ಮರುಳಸಿದ್ಧಯ್ಯನವರು ಸಮಾಜ ಕಾರ್ಯಕ್ಕೆಂದು ಮೀಸಲಾದ ಸ್ವಯಂಸೇವಾ ಸಂಸ್ಥೆಯೊಂದನ್ನು ಸ್ವಸ್ತಿ ಹೆಸರಿನಲ್ಲಿ ಇಪ್ಪತ್ತನೆಯ ಶತಮಾನದ, ಎಂಟನೆಯ ದಶಕದಲ್ಲಿ ಸ್ಥಾಪಿಸಿ, ನಡೆಸಿಕೊಂಡು ಬರುತ್ತಿದ್ದಾರೆ. ಸ್ವಸ್ತಿ ಒಂದು ಸಂಸ್ಕೃತ ಶಬ್ದ. ಇದರ ಅರ್ಥ ಕಲ್ಯಾಣ, ಕ್ಷೇಮ, ಒಳಿತು ಎಂದು, ಆದರೆ ಇದು ಇಂಗ್ಲೀಷಿನ ಶಬ್ದಗಳ ಮೊದಲಕ್ಷರಗಳ ಸಂಯುಕ್ತ ಶಬ್ದ. ಇಂಗ್ಲಿಷಿನ ಶಬ್ದಗಳ ಕನ್ನಡ, ಅರ್ಥ ಸಮಾಜಕಾರ್ಯ ಮತ್ತು ಸಾಮಾಜಿಕ ರೂಪಾಂತರ ಎಂದು. ಇದರ ತಾತ್ತ್ವಿಕ ಹಿನ್ನೆಲೆ ಎಂದರೆ, ಸಾಮಾಜಿಕ ಅಭ್ಯುದಯವನ್ನು ಗುರಿಯಾಗಿರಿಸಿಕೊಂಡು, ಸಮಾಜವನ್ನು ಪರಿವರ್ತಿಸಬೇಕು ಎಂಬುದೇ ಆಗಿದೆ. ಭಾರತೀಯ ಸಮಾಜವು ಏಣಿ ಶ್ರೇಣಿಗತವಾದ ಅಸಮಾನತೆಯ ಸಮಾಜ; ಇದನ್ನು ತೀವ್ರವಾಗಿ ರಾಚನಿಕವಾಗಿ ಪರಿವರ್ತಿಸಲೇಬೇಕು, ಅಂಥ ಪರಿವರ್ತನೆಯ ಮೇಲೆ ಸಮಾನತೆಯ ಸಮಾಜವನ್ನು ನಿರ್ಮಿಸಬೇಕು ಎಂಬ ತಮ್ಮ ಚಿಂತನೆಗೆ ರೂಪು ಕೊಡಲೆಂದೇ ಈ ಸ್ವಯಂಸೇವಾ ಸಂಸ್ಥೆಯನ್ನು ಮರುಳಸಿದ್ಧಯ್ಯನವರು ರೂಪಿಸಿದ್ದು. ಈ ಸಂಸ್ಥೆಯ ಸ್ಥಾಪನೆಯಿಂದ ಈ ಹಳ್ಳಿ ಗೊಂಚಲಿನಲ್ಲಿರುವ ಮಕ್ಕಳ, ಮಹಿಳೆಯರ, ಬಡವರ, ಹಿಂದುಳಿದವರ ಜಾಗೃತಿಗೆ ಚಾಲನೆ ದೊರೆಯಿತು. ಜನರಲ್ಲಿ ಪ್ರಶ್ನಿಸುವ ಮನೋಭಾವ ಮೂಡತೊಡಗಿತು.

ಸ್ವಸ್ತಿ ಸಂಸ್ಥೆಯ ಸ್ಥಾಪನೆಯ ಜೊತೆ ಜೊತೆಗೇ ಪ್ರಾಥಮಿಕ ಶಾಲೆಯು ಹಿರಿಯ ಪ್ರಾಥಮಿಕ ಅಥವಾ ಮಾಧ್ಯಮಿಕ ಶಾಲೆಯು ಆರಂಭವಾಯ್ತು; ಪ್ರೋತ್ಸಾಹಕ ಪ್ರಾಯೋಜನೆ ಎಂಬ ನವೀನ ಪ್ರಾಯೋಜನೆಯ ಮೂಲಕ ಶಾಲಾ ಮಕ್ಕಳಿಗೆ ಹೊಸ-ಹೊರಗಿನ-ಪ್ರಪಂಚದ ಪರಿಚಯವಾಗತೊಡಗಿತು. ಸ್ವಸ್ತಿಯ ನೆರವಿನಿಂದ ಈ ಹಳ್ಳಿ ಗೊಂಚಲಿನಲ್ಲಿ ಮಾತ್ರವಲ್ಲದೆ ಆ ತಾಲ್ಲೂಕಿನ ತೀರಾ ಹಿಂದುಳಿದ ಹಳ್ಳಿಗಳಲ್ಲಿ ಶಿಶುಪಾಲನ ಕೇಂದ್ರಗಳ ಸ್ಥಾಪನೆಯ ಮೂಲಕ ಸಮುದಾಯ ಸಂಘಟನೆಯ ಕಾರ್ಯ ನಡೆಯತೊಡಗಿತು. ಆ ಸಮುದಾಯದಲ್ಲಿ ಮಕ್ಕಳು, ಅದರಲ್ಲೂ ಹುಡುಗಿಯರು, ಪ್ರೌಢಶಾಲಾ ಶಿಕ್ಷಣದಿಂದ ವಂಚಿತರಾಗಿದ್ದರು. ಬಹುಕಾಲದ ಬೇಡಿಕೆ, ಒತ್ತಡಗಳಿಂದ ಮರುಳಸಿದ್ಧಯ್ಯನವರ ಅಣ್ಣ ಹಿ.ಮ. ನಾಗಯ್ಯನವರ ಮಕ್ಕಳ ನೆರವಿನಿಂದ ಒಂದು ಸರಕಾರಿ ಪ್ರೌಢಶಾಲೆಯು ಇಪ್ಪತ್ತನೆಯ ಶತಮಾನದ ಆದಿಯಲ್ಲಿ ಆರಂಭವಾಯ್ತು.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಮಾಜಕಾರ್ಯ ಪ್ರಾಧ್ಯಾಪಕರಾಗಿದ್ದ ಮರುಳಸಿದ್ಧಯ್ಯನವರು ಅಂತರಾಷ್ಟ್ರೀಯ ಸಮಾಜಕಾರ್ಯ ಸಮ್ಮೇಳನದ ಮೂಲಕ ಸಂಪರ್ಕ ಹೊಂದಿದ್ದುದರಿಂದ ಸ್ವಸ್ತಿ ಸಂಸ್ಥೆಯ ಗ್ರಾಮೀಣ ಉನ್ನತಿ ಕಾರ್ಯಕ್ರಮಗಳ ಹಮ್ಮುವಿಕೆಯಿಂದ, ಸಮಾಜಕಾರ್ಯದಲ್ಲಿ ವೃತ್ಯಾತ್ಮಕ ತರಬೇತಿ ಪಡೆದ ಸಮಾಜ ಕಾರ್ಯಕರ್ತ ಹಾಗೂ ವೈದ್ಯರ ನೆರವು ದೊರೆತುದುದರಿಂದ ಸ್ವೀಡನ್ ದೇಶದ ವಿಶ್ವವಿದ್ಯಾಲಯಗಳ ಸಮಾಜಕಾರ್ಯ ಪ್ರಶಿಕ್ಷಣಾರ್ಥಿಗಳು ಮರುಳಸಿದ್ಧಯ್ಯನವರ ಮಾರ್ಗದರ್ಶನದಲ್ಲಿ ಕ್ಷೇತ್ರ ಕಾರ್ಯವನ್ನು ಆ ಗ್ರಾಮೀಣ ಪ್ರದೇಶದಲ್ಲಿ 1987ರಲ್ಲಿ ಆರಂಭಿಸಿದರು. ಅಂದಿನಿಂದ ತಂಡ ತಂಡವಾಗಿ ಪ್ರಶಿಕ್ಷಣಾರ್ಥಿಗಳು ಕಾರ್ಯ ನಿರತರಾಗಿದ್ದುದರಿಂದ ವಿದೇಶದ ಅನುಭವಗಳ ಅಲೆಗಳಿಗೆ ಸಮುದಾಯವು ತೆರೆದುಕೊಂಡಿತು. ಈ ನಡುವೆ, ಬಳ್ಳಾರಿ-ದಾವಣಗೆರೆ ಜಿಲ್ಲೆಗಳ ಕಾಲೇಜುಗಳ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಗಳು, ಸರಕಾರದ ಅರಣ್ಯ ಮತ್ತಿತರ ಇಲಾಖೆಗಳ ಚಟುವಟಿಕೆಗಳು, ವಿವಿಧ ವಿಶ್ವವಿದ್ಯಾಲಯಗಳ, ಅಕಾಡೆಮಿಗಳ ಕಾರ್ಯಕ್ರಮಗಳು ಆ ಪ್ರದೇಶದಲ್ಲಿ ಪ್ರವೇಶ ಪಡೆದುದರಿಂದ, ಸಾರಿಗೆ ಸಂಪರ್ಕದ ಸೌಲಭ್ಯವೂ ದೊರೆತುದುದರಿಂದ ಆ ಪ್ರದೇಶದ ಜೀವನ ಶೈಲಿಗೆ ನವೀನ ತಿರುವು ದೊರೆತುಕೊಂಡದ್ದು ನಾನಾ ರೀತಿಗಳಿಂದ ಪ್ರಕಟವಾಗತೊಡಗಿತು.

ಮರುಳಸಿದ್ಧಯ್ಯನವರ ಸ್ವಪ್ನದೇಶಾಭಿಮಾನವು-ಸ್ವೀಡನ್ ದೇಶದಲ್ಲಿ ತಮ್ಮ ಪತ್ನಿಯೊಡನೆ ಸಂದರ್ಶನದಲ್ಲಿದ್ದಾಗ-ಗರಿಗೆದರಿತು. ಆ ದೇಶದ ಮಧ್ಯ ಭಾಗದ ಓಸ್ತರ್ಸುಂದ್ ಯಮ್ತ್ಲ್ಯಾಂಡಿನ ಗೀತೆಯನ್ನು ಹೃದ್ಗತ ಮಾಡಿಕೊಂಡು ಆ ಪ್ರದೇಶದ ಅಭಿಮಾನವನ್ನು ಅಲ್ಲಿನವರು ಪ್ರದರ್ಶಿಸುತ್ತಿದ್ದುದನ್ನು ಕಂಡು ತಮ್ಮ ಊರಿನ ಬಗೆಗೆ ಮರುಳಸಿದ್ಧಯ್ಯನವರು ಒಂದು ಪದ್ಯವನ್ನು ರಚಿಸಿ, ಅದನ್ನು ಆಂಗ್ಲ ಭಾಷೆಗೆ ತರ್ಜುಮೆ ಮಾಡಿ ಅಲ್ಲಿನವರಿಗೆ ಹಂಚಿದರು. ಆ ಪದ್ಯದ ನಾಲ್ಕು ತುಣುಕುಗಳು ಹೀಗಿವೆ:

 ಬನ್ನಿ ಗೆಳೆಯರೆ ಬನ್ನಿ ಗೆಳೆಯರೆ
 ನಮ್ಮ ಚೆಲುವಿನ ಹಳ್ಳಿಗೆ
 ಚಳಿಯ ಬಳ್ಳಿಯ ಬಿಸಿಲ ಹಣ್ಣಿನ
 ಹಿರಿಯ ಕುಂಬಳಗುಂಟೆಗೆ.
 
 ಎಂದು ಹುಟ್ಟಿತೊ ಹೇಗೆ ಬಾಳಿತೊ
 ಒಂದು ನಮಗೆ ತಿಳಿಯದು
 ಇಂದು ಹೀಗಿದೆ ಮುಂದೆ ಏನಹು-
 ದೆಂದು ಕೂಡಾ ಹೊಳೆಯದು.
 
 ಜಡವಿದೆಂಬುವ ಜಗದ ತುಣುಕು
 ಸಸ್ಯ ಪ್ರಾಣಿಯ ನೆಲೆಯಿದು
 ಮನುಜ ಕುಲಗಳು ಚುಳುಗೊಂಡಿಹ
 ವಿಶ್ವಲೀಲೆಯ ಕುಂಟೆಯು.
 
 ದೂರ ದೂರದಿ ಅವಳಿಗುಡ್ಡವು
 ನಾಲ್ಕು ಕಡೆಯೂ ದಿಬ್ಬವು
 ಮಳೆಯ ಮುತ್ತಿಗೆ ಬಾಯಿಬಿಟ್ಟಿಹ
 ಬಟ್ಟ ಬಯಲಿನ ಹೊಲಗಳು.

ಈ ಸಾಲುಗಳು, ಬಹುಶಃ, ಆ ಪ್ರದೇಶದ ಒಂದು ಸ್ಥೂಲ ನೋಟವನ್ನು ಕೊಟ್ಟಾವು. ಜೊತೆಗೆ, ಮರುಳಸಿದ್ಧಯ್ಯನವರ ಕಾವ್ಯಾಸಕ್ತಿಯ ಪರಿಚಯವೂ ಆದೀತು.
 
ಕೌಟುಂಬಿಕ ಹಿನ್ನೆಲೆ
ಇವರ ಪ್ರಾಥಮಿಕ ಕುಟುಂಬವು ದೊಡ್ಡದು. ಬಹುಶಃ ಮುಖ್ಯವಾಗಿ ಹತ್ತಿರ ಹತ್ತಿರದ ಎರಡು ಜಿಲ್ಲೆಗಳಲ್ಲಿ ಹಬ್ಬಿ ಹರಡಿರುವ ಬಳಗದ ಸಾಂಕೇತಿಕ ಪ್ರತಿನಿಧಿಯಾಗಿಯೂ ಈ ಕುಟುಂಬವು ರೂಪುಗೊಂಡಿದೆ ಎಂದೆನಿಸುತ್ತದೆ. ಮರುಳಸಿದ್ಧಯ್ಯನವರ ಹೆತ್ತವರಿಗೆ (ದೊಡ್ಡಬಸಯ್ಯ/ದೊಡ್ಡಬಸಮ್ಮ) ಹತ್ತು ಮಕ್ಕಳು-ಏಳು ಮಗಂದಿರು, ಮೂರು ಮಗಳಂದಿರು (ಒಬ್ಬ ಮಗ ಎಳವೆಯಲ್ಲೇ ತೀರಿಕೊಂಡ), ಮರುಳಸಿದ್ಧಯ್ಯನವರ ಅಣ್ಣಂದಿರೂ ಅಕ್ಕಂದಿರಾರೂ ಜೀವಂತ ಇಲ್ಲ. ಮರುಳಸಿದ್ಧಯ್ಯನವರ ಹುಟ್ಟು ಮತ್ತು ಹೆಸರು ವೈಶಿಷ್ಟ್ಯಪೂರ್ಣವೆಂದೇ ಹೇಳಬೇಕು. ಇವರನ್ನು ಹೆತ್ತವರಿಗೆ ಇವರ ಹುಟ್ಟು ಬೇಕಿರಲಿಲ್ಲ ಎಂದೇ ತೋರುತ್ತದೆ. ಅಂದು ಜನನ ನಿಯಂತ್ರಣ ತಾಂತ್ರಿಕತೆಯ ಪರಿಚಯ, ಆ ಹಳ್ಳಿಗರಿಗೆ, ಇದ್ದಿಲ್ಲವಾದುದರಿಂದ ಅವರ ಅನಪೇಕ್ಷೆಯನ್ನು ಅವರು ಅಂದುಕೊಂಡಿದ್ದ ಕೊನೆಯ ಮಗುವಿಗೆ (ಹೆಣ್ಣು) ಸಾಕಮ್ಮ ಎಂದು ಹೆಸರಿಟ್ಟು, ವ್ಯಕ್ತಪಡಿಸಿದ್ದರು. ಹುಟ್ಟು-ಸಾವುಗಳು ಹುಲು ಮಾನವ ಕೈಲಿಲ್ಲವಾದುದರಿಂದ, ಅವು ದೇವರ ಕೈಲಿದ್ದುದರಿಂದ, ಬೇಡವೆನ್ನಿಸಿದರೂ ಮರುಳಸಿದ್ಧಯ್ಯನವರ ಜನನವು (ಕೊನೆಯ ಮಗುವಾಗಿ) ನಡೆದೇ ಹೋಯ್ತು, ಅದು 1931ರ ಜುಲೈ 29ರಂದು. (ಮೊದಮೊದಲು ಹೆರಿಗೆಗಳು ಹೆಣ್ಣಿನ ತವರಿನಲ್ಲಿಯೇ ನಡೆಯುತ್ತಿದ್ದುದೂ, ಆನಂತರದ ಹೆರಿಗೆಗಳು ಗಂಡನ ಮನೆಯಲ್ಲಿಯೇ ನಡೆಯುತ್ತಿದ್ದುದೂ ಆ ಕಾಲದ ಸಂಪ್ರದಾಯ, ಹೀಗಾಗಿ ಮರುಳಸಿದ್ಧಯ್ಯನವರ ಜನನವಾದದ್ದು ಹಿರೇ ಕುಂಬಳಗುಂಟೆಯ ಇವರ ತಂದೆಯವರ ಹಳೇಮನೆಯಲ್ಲಿ). ಇವರ ಹೆಸರೂ ಪರಿವರ್ತನೆಗೊಂಡದ್ದೇ ಆಗಿದೆ. ಅಂದಿನ ಕಾಲದಲ್ಲಿ ಮಗುವಿಗೆ ಅದರ ಅಜ್ಜ-ಅಜ್ಜಿಯರ ಇಲ್ಲವೆ ಮನೆ ದೇವರ ಹೆಸರು ಇರಿಸುವುದು ವಾಡಿಕೆಯಾಗಿತ್ತು. ಅಂತೆಯೇ ತನ್ನ ಕೊನೆಯ ಮಗುವಿಗೆ ಇವರ ತಾಯಿಯು ತನ್ನ ತಂದೆಯ ಹೆಸರು ಗುರುಸಿದ್ಧಯ್ಯ ಎಂದು ಹೆಸರಿಡಬೇಕು ಎಂದು ಅಪೇಕ್ಷೆ ಪಟ್ಟಿರಬೇಕು. ಯಾಕೆಂದರೆ ಇವರ ಯಾವ ಮಗ-ಮಗಳಿಗೂ ತನ್ನ ತವರಿನವರ ಹೆಸರನ್ನು ಇರಿಸಿರಲಿಲ್ಲ. ಬಹುಶಃ ಆ ಕೊರತೆಯನ್ನು ತುಂಬಲು ಈ ಹೆಸರನ್ನು ಕೊಟ್ಟಿರಬೇಕು. ಇದೂ ಕೈ ತಪ್ಪಿ ಹೋಗುತ್ತದೆ ಎಂಬ ಅರಿವು ಅವರಾರಿಗೂ ಇರಲಿಲ್ಲ ಎಂದು ಕಾಣುತ್ತದೆ. ಇನ್ನು ನಾಮಾಯಣದ ಬಗ್ಗೆ. ಅಂದಿನ ಕಾಲದಲ್ಲಿ ಮಕ್ಕಳಿಲ್ಲದವರು ಮಾತ್ರವಲ್ಲ ಇದ್ದವರೂ ತಮ್ಮ ಬಂಧುಗಳ ಮಕ್ಕಳನ್ನು ಸಾಕುತ್ತಿದ್ದುದುಂಟು, ಅಂತೆಯೇ ಇವರ ಕುಟುಂಬವು ದೊಡ್ಡದಿದ್ದರೂ ದೊಡ್ಡಬಸಮ್ಮನವರು ತನ್ನ ತಂಗಿಯ ಗುರುಸಿದ್ಧಮ್ಮನವರ ಮಗ ಮರುಳಸಿದ್ಧಯ್ಯ ಹೆಸರಿನವನನ್ನು ಸಾಕಿ ಸಲಹಿದರು. ಆತನು ಬೆಳೆದು ದೊಡ್ಡವನಾದ ಮೇಲೆ ಆತನ ಹೆತ್ತವರು ಬಂದು ಕರೆದೊಯ್ಯತೊಡಗಿದರು. ಆಗ ಅವನು ಹೋಗುವುದಿಲ್ಲ! ಎಂದು ಹಟ ಮಾಡಿದ. ನಾನು ಇಲ್ಲಿಂದ ಹೋದಮೇಲೆ ನನ್ನನ್ನು ನೀವು ಮರೆತುಬಿಡುತ್ತೀರಿ ಎಂದು ವಾದ ಹೂಡಿದ. ನಿನ್ನನ್ನು ಹೇಗೆ ಮರೆಯಲು ಸಾಧ್ಯ, ಮರೆಯುವುದಿಲ್ಲ! ಎಂದು ಎಷ್ಟೇ ಭರವಸೆ ಕೊಟ್ಟರೂ ಅವನು ಒಪ್ಪಲಿಲ್ಲ. ಹಾಗಾದರೆ ಈ ಗುರುಸಿದ್ಧನಿಗೆ ನನ್ನ ಹೆಸರಿಡಿರಿ! ಎಂದು ಹಟ ಹಿಡಿದ. ಸರಿ, ಹಾಗೇ ಆಗಲಿ ಎಂದು ಹೆಸರು ಬದಲಿಸಿದರು. ಹೀಗಾಗಿ ಗುರುಸಿದ್ಧಯ್ಯ ಹೋಗಿ ಮರುಳಸಿದ್ಧಯ್ಯ ಅವತರಿಸಿದ.

ಈ ಕುಟುಂಬದ ಬಗ್ಗೆ ಹೇಳುವಾಗಲೇ ಈ ಕುಟುಂಬದವರ (ಅಂದರೆ, ಗಂಡು ಸಂತತಿಯ) ಪೂರ್ವಜರ ಮೂಲದ ಬಗ್ಗೆ ಹೇಳಬೇಕು. ಮರುಳಸಿದ್ಧಯ್ಯನವರ ತಂದೆ ದೊಡ್ಡಬಸಯ್ಯನವರ ತಂದೆ ಸಿದ್ಧಲಿಂಗಯ್ಯ ಹಿರೇಕುಂಬಳಗುಂಟೆಯಲ್ಲಿ ಹುಟ್ಟಿದವರಲ್ಲ. ಅವರ ತಂದೆಯ ಊರು ಜಗಳೂರು ತಾಲ್ಲೂಕಿನ ಸೊಕ್ಕೆ ಹೋಬಳಿಯ ಚಿಕ್ಕ ಬಂಟನಹಳ್ಳಿ. ಇವರ ತಾಯಿಯ ತವರೂರು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ಶಾಂತವ್ವನಹಳ್ಳಿ. ಸಂಪ್ರದಾಯದಂತೆ ಅವರ ಜನನವು ತಾಯ ತವರಿನಲ್ಲಿಯೇ ಆಯಿತು. ಚಿಕ್ಕಬಂಟನಹಳ್ಳಿಯಲ್ಲಿಯೇ ಬಾಲ್ಯವನ್ನು ಕಳೆದ ಸಿದ್ಧಲಿಂಗಯ್ಯನವರು, ಎಳವೆಯಲಿಯೇ ತಾಯಿಯನ್ನು ಕಳೆದುಕೊಂಡಿದ್ದುದರಿಂದಲೊ, ತನಗೆ ಮಲತಾಯಿ ಬಂದಿದ್ದುದರಿಂದಲೋ, ತನ್ನ ಪರಂಪರೆಯ ಜಂಗಮ ವೃತ್ತಿ ಧಾರ್ಮಿಕ ಭಿಕ್ಷಾಟನೆಯ ಕಾರಣದಿಂದಲೋ ಅವರು ಬಳ್ಳಾರಿ ಜಿಲ್ಲೆಯ ಕೂಡ್ಲಿಗೆ ತಾಲ್ಲೂಕಿನ ಹಿರೇಕುಂಬಳಗುಂಟೆಗೆ ಬಂದು ನೆಲೆಸಿದರು. ಅಂದಿನ ಸಂಪ್ರದಾಯದ ಪ್ರಕಾರ ವೀರಶೈವರ ಹಳ್ಳಿಯಲ್ಲಿ ಪುರೋಹಿತ ವರ್ಗದ ಜಂಗಮ ಕುಟುಂಬ ಇರಬೇಕು ಎಂಬ ಕಾರಣದಿಂದಲೊ ಏನೋ ಸಿದ್ಧಲಿಂಗಯ್ಯನವರು ಈ ಊರಿನಲ್ಲಿ ನೆಲೆಸುವಂತಾಯ್ತು. ಈ ಊರಿನ ವೀರಶೈವ ಕುಡು ಒಕ್ಕಲಿಗರು ಮಾತ್ರವಲ್ಲದೆ ಇತರ ಜಾತಿಯವರೂ, ಜೊತೆಗೆ ಜಗಳೂರು ತಾಲ್ಲೂಕಿನ (ಪಕ್ಕದ) ಹನುಮನಾಗತಿಹಳ್ಳಿ (ಬುಕ್ಕಬೋರನಹಳ್ಳಿ) ವಾಸಿಗಳೂ, ಇವರ ಶಿಷ್ಯರಾದರು. ಜಂಗಮರು ಪೌರೋಹಿತ್ಯ-ಭಿಕ್ಷಾಟನೆಯ ಜೊತೆಗೆ ಒಕ್ಕಲುತನವನ್ನೂ ಮಾಡುತ್ತಾರೆ. ಹೀಗಾಗಿ ಸಿದ್ಧಲಿಂಗಯ್ಯನವರು ಬುಕ್ಕಬೋರನಹಳ್ಳಿಗೆ ಸೇರಿದ ಜಮೀನುಗಳನ್ನು ಕೊಂಡುಕೊಂಡು ಒಕ್ಕಲುತನವನ್ನೂ ಮಾಡತೊಡಗಿದರು. ಹೀಗೆ ಮನೆಯನ್ನು ಒಂದು ಜಿಲ್ಲೆಯಲ್ಲೂ, ಹೊಲವನ್ನು ಪಕ್ಕದ ಜಿಲ್ಲೆಯಲ್ಲೂ ಪಡೆದು ಎರಡೂ ಜಿಲ್ಲೆಗಳ ಗೊಣಸು ಇವರಾದರು. ಇವರು ಅಕ್ಷರಸ್ಥರಾಗಿದ್ದಿರಬಹುದು, ಆದರೆ ಓದಿದವರಲ್ಲ. ಇವರಿಗೆ ನಾಲ್ಕು ಜನ ಮಗಂದಿರು, ಒಬ್ಬ ಮಗಳು ಆದರು. ಇವರು ನೂರಾಹನ್ನೊಂದು ವರ್ಷ ಬದುಕಿದವರು. ಮರುಳಸಿದ್ಧಯ್ಯನವರಿಗೆ ಅಚ್ಚುಮೆಚ್ಚಿನ ಅಜ್ಜ ಆಗಿದ್ದರು. ಇವರ ಹಿರಿಯ ಮಗ ದೊಡ್ಡಬಸಯ್ಯನವರೇ ಮರುಳಸಿದ್ಧಯ್ಯನವರ ತಂದೆ, ಜಗಳೂರಿನ ತಾಲ್ಲೂಕಿನ (ಚಿಕ್ಕಬಂಟನ ಹಳ್ಳಿಯ ಪಕ್ಕದ) ಗಡಿಮಾಕುಂಟೆಯ ದೊಡ್ಡಬಸಮ್ಮನವರೇ ತಾಯಿ. (ಕಾಕತಾಳೀಯ ಎನ್ನಿ, ಸುಪ್ತ ಪ್ರಜ್ಞೆಯ ಪ್ರಭಾವ ಎನ್ನಿ ಮರುಳಸಿದ್ಧಯ್ಯನವರ ಚೊಚ್ಚಲು ಮಾನವಶಾಸ್ತ್ರೀಯ-ಸಮಾಜಶಾಸ್ತ್ರೀಯ ಸಂಶೋಧನೆಯ ಗ್ರಂಥದ ಶೀರ್ಷಿಕೆ ಮಾಕುಂಟೆಯ ಮುದುಕರು (Old People of Makunti). ಇದರ ಗುಪ್ತನಾಮ ಮಾಕುಂಟೆ ಮನಗುಂಡಿಯ  (ಧಾರವಾಡ ಜಿಲ್ಲೆಯ) ಬದಲು ಬಂದದ್ದು, ಬಹುಶಃ ಇವರ ತಾಯಿಯ ತವರಿನ ಹೆಸರು).

ಸಿದ್ಧಲಿಂಗಯ್ಯನವರ ಪೂರ್ವಜರು ಮೂಲತಃ ಎಲ್ಲಿಯವರು ಎಂದು ಬೆದಕಿದಾಗ ಉತ್ತರಕರ್ನಾಟಕದ ವಂಶಗಳ ಪರಂಪರೆಯ ದಾಖಲುದಾರರಾದ ಹೆಳವರ ಹೊತ್ತಿಗೆಯು ತೆರೆದು ಹೇಳುವುದು ಇವರ ಪೂರ್ವಜರ ಮೂಲ ಸ್ಥಳ ಏಳುಕೊಳ್ಳದ ಎಲ್ಲಮ್ಮನ ಕ್ಷೇತ್ರ ಈಗಿನ ಬೆಳಗಾವಿ ಜಿಲ್ಲೆಯ ಸವದತ್ತಿ (ಪರಸಘಡ) ಪ್ರದೇಶ. (ಅಂದರೆ, ಇವರ ಮೂಲ ಪುರುಷರು ಕರ್ನಾಟಕ ಏಕೀಕರಣದ ಮೂಲ ಪುರುಷರೂ ಹೌದು!?)

ಮರುಳಸಿದ್ಧಯ್ಯನವರ ಕುಟುಂಬ, ಬಳಗ, ಸಂಪ್ರದಾಯದ ಚಹರೆ ಇತ್ಯಾದಿಗಳ ಬಗ್ಗೆ ಮತ್ತೊಂದಿಷ್ಟು ವಿವರ. ಆಗಿನ ಕಾಲದ ಆ ಪ್ರದೇಶದ ಸಂಪ್ರದಾಯದ ಪ್ರಕಾರ ಒಳವಿವಾಹ ಮಾತ್ರವೇ ಅಲ್ಲ ಒಳ ಒಳಗಿನ ವಿವಾಹಗಳೇ ಹೆಚ್ಚು ಪ್ರಚಲಿತವಾಗಿದ್ದವು. ಅಬ್ರಾಹ್ಮಣ ಜಾತಿಗಳಂತೂ ಈ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದವರು. (ಈ ಸಂಪ್ರದಾಯವು ಎಷ್ಟು ಪ್ರಬಲವಾಗಿತ್ತೆಂದರೆ, ಇದರ ಪ್ರಭಾವಕ್ಕೆ ಒಳಗಾದ ಕೆಲವು ಬ್ರಾಹ್ಮಣರೂ ಇಂಥ ವಿವಾಹ ಪದ್ಧತಿಯನ್ನೂ ಅಂಗೀಕರಿಸುತ್ತಿದ್ದುದೂ ಉಂಟು.) ಇದರ ಪ್ರಕಾರ, ವರನು ತನ್ನ ತಾಯಿಯ ಸೋದರನ (ಸೋದರ ಮಾವನ), ಅಥವಾ ತನ್ನ ತಂದೆಯ ಸೋದರಿಯ (ಸೋದರತ್ತೆಯ) ಅಥವಾ ತನ್ನ ಅಕ್ಕನ ಮಗಳನ್ನೊ ವಧುವನ್ನಾಗಿ ಪಡೆಯುವುದೇ ಈ ಪದ್ಧತಿಯಾಗಿತ್ತು. (ಇಂಥ ವೈವಾಹಿಕ ಪದ್ಧತಿಯ ಆಚರಣೆಯಿಂದ ಉಣ್ಮಿದ ಸಂಬಂಧಗಳ ಸಂಕೀರ್ಣ ಸ್ಥಿತಿಯನ್ನು ಜಂಗಮರಲ್ಲಿ ನಡೆಯುವ ವೈವಾಹಿಕ ಆಚರಣೆಗಳ ಅಧ್ಯಯನ ಮಾಡಿದ ಮರುಳಸಿದ್ಧಯ್ಯನವರು ಒಂದು ಸಮಾಜ ಶಾಸ್ತ್ರೀಯ ಸಂಪ್ರಬಂಧವನ್ನು ಆಂಗ್ಲ ಭಾಷೆಯಲ್ಲಿ ಬರೆದು ಮೊದಲು 1975ರಲ್ಲಿ ಪ್ರಕಟಿಸಿದರು. ಅದನ್ನೊಳಗೊಂಡ ಕೃತಿಯು ವಿಸ್ತೃತ ಆವೃತ್ತಿಯಾಗಿ 2008ರಲ್ಲಿ ಪ್ರಕಟವಾಯ್ತು. ನೋಡಿ : Types of Marriage and Derivative Relationships in Dr. H.M. Marulasiddaiah, Sectarian and Secular Bases of Welfare and Development, IBH Prakashana, Bangalore, 2008, PP 1-11) ಇದರ ಜೊತೆಗೆ ಮದುವೆಗಳು ಸಾಮಾನ್ಯವಾಗಿ ಒಂದು ಚಿಕ್ಕ ಪ್ರದೇಶದಲ್ಲಿಯೇ (ಸಾಧ್ಯವಾದರೆ ಒಂದೇ ಊರಿನಲ್ಲಿಯೇ) ನಡೆಯುತ್ತಿದ್ದುದುಂಟು. ವೈವಾಹಿಕ ಭೂಗೋಲವನ್ನು ಗುರುತಿಸುವುದಾದರೆ ವರ-ವಧುವಿನ ಊರುಗಳ ಮಧ್ಯೆ 25 ಕಿ.ಮೀ.ಗಿಂತಲೂ ಹೆಚ್ಚು ಅಂತರವಿರುತ್ತಿರಲಿಲ್ಲ. ಒಳ ಒಳ ವಿವಾಹ ಮತ್ತು ಭೌಗೋಳಿಕ ದೂರವನ್ನು ಗಮನದಲ್ಲಿರಿಸಿಕೊಂಡು ಮರುಳಸಿದ್ಧಯ್ಯನವರು ಸುಮಾರು 15 ಕಿ.ಮೀ. ದೂರದಲ್ಲಿದ್ದ ಜಗಳೂರು ತಾಲ್ಲೂಕಿನ ಹೊಸಕೆರೆ ಗ್ರಾಮದಲ್ಲಿದ್ದ ತಮ್ಮ ಅಕ್ಕನ ಮಗಳು ಶಾಂತವೀರಮ್ಮ ಅವರನ್ನು ಮದುವೆಯಾದರು. ಈ ಮದುವೆಯು ಇವರು ಸಮಾಜಶಾಸ್ತ್ರದ ಆನರ್ಸ್ ಓದುತ್ತಿರುವಾಗಲೇ ನಡೆಯಿತು. (ಅಂದಿನ ಸಂಪ್ರದಾಯದ ಪ್ರಕಾರ ವರನ ಊರಿನಲ್ಲಿಯೇ ಮನೆಯಲ್ಲಿಯೇ ಆಯ್ತು). ಇವರು ಸಮಾಜಶಾಸ್ತ್ರದ ಎಂ.ಎ. ಪದವಿ ಪಡೆದು ಸಮಾಜಕಾರ್ಯದಲ್ಲಿ ಎಂ.ಎ. ಪದವಿಗಾಗಿ ಅಧ್ಯಯನ ಮಾಡುವಷ್ಟರಲ್ಲಿ ಮೊದಲ ಮಗನ ತಂದೆಯಾದರು; ಸಮಾಜಕಾರ್ಯ-ಸಮಾಜಶಾಸ್ತ್ರ ಅಧ್ಯಾಪನದಲ್ಲಿದ್ದಾಗ ಮತ್ತೆ ಮೂರು  ಮಗಂದಿರನ್ನು ಪಡೆದರು. (ಕೌಟುಂಬಿಕ ಸಾಂಬಂಧಿಕ ಸಂಕೀರ್ಣ ತೊಡಕಿನಲ್ಲಿ ಸಿಕ್ಕು ಹಣ್ಣಾದ ಈ ದಂಪತಿ ಒಂದಾದರೂ ಮಗಳಿದ್ದಿದ್ದರೆ ಎಂದು ಹಲುಬುತ್ತಿರುವುದುಂಟು). 2008ರ ಹೊತ್ತಿಗೆ ಇವರ ಮೂರನೆಯ ಮಗನು ಅಪಘಾತಕ್ಕೀಡಾಗಿ (1998) ಮೃತನಾದರೆ, ಮೊದಲ ಮಗ ಕಾಯಿಲೆಯಿಂದ ತೀರಿಹೋದ. ದುರಂತಕ್ಕೀಡಾದ ಮಗ ಸತೀಶನ ಹೆಸರಿನಲ್ಲಿ ತಮ್ಮ ಊರಿನ ಹತ್ತಿರದ ದಲಿತರ ಊರನ್ನು ಅಭಿವೃದ್ಧಿಗಾಗಿ ಆಯ್ದುಕೊಂಡು ಆ ಕಾರ್ಯವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
​
ಇವರ  ಪತ್ನಿ ಶಾಂತಿವೀರಮ್ಮನವರು ಪ್ರಾಥಮಿಕ ಶಾಲೆಯನ್ನೂ ಮುಗಿಸಲಿಲ್ಲವಾದರೂ ತಮ್ಮ ಒಳನೋಟ, ಸೂಕ್ಷ್ಮ ದೃಷ್ಟಿಗಳಿಂದ ಬಳಗದವರ ಮತ್ತು ಸಂಪರ್ಕಕ್ಕೆ ಬಂದ ಇತರರ ವರ್ತನೆಗಳನ್ನೂ ಮಾನವ ಸಂಬಂಧಗಳನ್ನೂ ನಿಕಟವಾಗಿ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ. ಜೊತೆಗೆ, ತಮ್ಮ ಮನೆಯ ಒಳಹೊರಗನ್ನು ನಿರ್ಮಲವಾಗಿರಿಸಿಕೊಳ್ಳುವಲ್ಲಿ ಚಚ್ಚರದಿಂದ ನಿರತರಾಗಿರುತ್ತಾರೆ. ತಮ್ಮ ಅನಿಸಿಕೆ ಆಲೋಚನೆಗಳನ್ನು ತಮ್ಮ ಪತಿಯವರೊಡನೆ ಹಂಚಿಕೊಳ್ಳುತ್ತಾರೆ. ಇದರಿಂದಾಗಿಯೇ ಮರುಳಸಿದ್ಧಯ್ಯನವರ ಬರೆಹಗಳಲ್ಲಿ ಇವರ ಚಿಂತನೆಗಳೂ ಸೇರಿಕೊಂಡಿರುವುದುಂಟು. ಮರುಳಸಿದ್ಧಯ್ಯನವರ ನಿರ್ಮಲ ಕರ್ನಾಟಕ ಪರಿಕಲ್ಪನೆಯು ತಮ್ಮ ಪತ್ನಿಯ ನೈರ್ಮಲ್ಯದ ಕಾಳಜಿಯಿಂದ ಸುಳುಹು ಪಡೆದುದಾಗಿ ಇವರು ಪ್ರಾಂಜಲವಾಗಿ ಹೇಳುತ್ತಾರೆ. ತಮ್ಮ ದುಡಿಮೆಯಿಂದ ಉಳಿಸಿದ್ದುದನ್ನು ಸಮಾಜಾಭಿವೃದ್ದಿಗೆ ಖರ್ಚು ಮಾಡಬೇಕು ಎಂಬುದು ಈ ದಂಪತಿಯ ಏಕಾಭಿಪ್ರಾಯವಾಗಿದೆ.

  • Facebook
  • Twitter
  • Pinterest
  • Google+
Buy Now

Site
Home
Team Members
Biography
Nirathanka Citizens Connect
Awards / Books
Media and Gallery
Blog
Job Openings
Online Groups
Online Store
​Contact
Vertical Divider
Follow us on
Picture
Ramesha For Ullal Ward
Picture
ramesha_for_ullal_ward
Picture
Ramesha for Ullal Ward
Picture
Ramesha Niratanka
Picture
Nirathanka
Picture
Ramesha for Ullal Ward
Vertical Divider
Contact us
Ph: 080-23213710
Mob: 
+91-80730 67542
          +91-83102 41136
E-mail: [email protected]

Our Other Websites
  • www.nirutapublications.org
  • www.hrkancon.com 
  • www.niratanka.org  
  • www.mhrspl.com


Picture
Follow Ramesha For Ullalu Ward WhatsApp Channel
Follow Nirathanka Citizens Connect WhatsApp Channel


COPYRIGHT © 2020 RAMESHANIRATANKA. ALL RIGHTS RESERVED.
Website Designing & Developed by : ​M&HR Solutions Private Limited (www.mhrspl.com)
  • Home
  • TEAM MEMBERS
  • Biography
  • Blog
  • Media and Gallery
  • Job Openings
  • Join Our Online Groups
  • Online Store
  • Nirathanka Citizens Connect
  • Contact